ವಿಶೇಷ ದಾಖಲಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಾಶ್ಮೀರದ ಯುವಕ ಉಮ್ರಾನ್ ಮಲಿಕ್
ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 15ನೇ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ವೇಗದ ಬೌಲಿಂಗ್ ದಾಳಿ ಮುಂದುವರಿಸಿರುವ ಕಾಶ್ಮೀರದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಇದೀಗ ವಿಶೇಷ ದಾಖಲಪಟ್ಟಿಯಲ್ಲಿ ದಿಗ್ಗಜರೊಂದಿಗೆ ಸ್ಥಾನ ಗಿಟ್ಟಿಸಿದ್ದಾರೆ.
ಮುಂಬೈನ ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 20ನೇ ಓವರ್ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್, ಮೇಡಿನ್ ಓವರ್ ಎಸೆದು, ಮೂರು ವಿಕೆಟ್ ಕಿತ್ತರು.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಮೇಡಿನ್ ಸಾಧನೆ ಮೆರೆದ ನಾಲ್ಕನೇ ಬೌಲರ್ ಎನಿಸಿಕೊಳ್ಳುವ ಮೂಲಕ ಇರ್ಫಾನ್ ಪಠಾಣ್, ಲಸಿತ್ ಮಾಲಿಂಗ ಮತ್ತು ಜಯದೇವ್ ಉನಾದ್ಕಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಗಂಟೆಗೆ 150 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ 22 ವರ್ಷದ ಯುವ ವೇಗಿ, ಪಂಜಾಬ್ ಎದುರು 4 ಓವರ್‌ಗಳಲ್ಲಿ 28 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು.
ಇದು ಅವರ ಐಪಿಎಲ್ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಕಳೆದ ಬಾರಿ ನೆಟ್ ಬೌಲರ್ ಆಗಿ ಸನ್‌ರೈಸರ್ಸ್ ತಂಡ ಸೇರಿದ್ದ ಉಮ್ರಾನ್ ಅವರನ್ನು 4 ಕೋಟಿ ರೂ. ಸಂಭಾವನೆ ಕೊಟ್ಟು ಹೈದರಾಬಾದ್ ಫ್ರಾಂಚೈಸಿ ತನ್ನಲ್ಲಿಯೇ ಉಳಿಸಿಕೊಂಡಿತ್ತು.