ರಾಜೌರಿಯಲ್ಲಿ ನಡೆದ ಗಣಿ ಸ್ಫೋಟದಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮ:
ಒಬ್ಬರಿಗೆ ಗಾಯ

ಶ್ರೀನಗರ: ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಗಣಿ ಸ್ಫೋಟದಲ್ಲಿ ಗಾಯಗೊಂಡಿದ್ದ ಭಾರತೀಯ ಸೇನೆಯ ಅಧಿಕಾರಿ ಮತ್ತು ಯೋಧ ಶನಿವಾರ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನೌಶೇರಾ ಸೆಕ್ಟರ್‌ನ ಕಲಾಲ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ಸೇನಾ ಸಿಬ್ಬಂದಿಯನ್ನು ಲೆಫ್ಟಿನೆಂಟ್ ರಿಷಿ ಕುಮಾರ್ ಮತ್ತು ಸಿಪಾಯ್ ಮಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಧಿಕಾರಿಗಳನ್ನು ತಕ್ಷಣ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಅವರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇನ್ನೋರ್ವ ಯೋಧ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಡಿಯಾಚೆಯಿಂದ ಭಯೋತ್ಪಾದಕರ ಒಳನುಸುಳುವಿಕೆಯನ್ನು ಪರಿಶೀಲಿಸುವ ಕ್ರಮಗಳ ಭಾಗವಾಗಿ ಸೇನಾಪಡೆಯ ಗಸ್ತು ಕರ್ತವ್ಯ ದಲ್ಲಿದ್ದ ಸಂದರ್ಭದಲ್ಲಿ ಗಣಿ ಸ್ಪೋಟ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.