ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ
ನವ ದೆಹಲಿ: ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಯಾರಾದರೊಬ್ಬರ ಕೆಲಸವನ್ನು ದೇಶ ಅಥವಾ ಸರ್ಕಾರ ಗುರುತಿಸಿದಾಗ ಸಂತೋಷವಾಗುತ್ತದೆ. ಹಾಗಾಗಿ, ಸರ್ಕಾರ ಮತ್ತು ದೇಶದ ಜನರು ನೀಡಿದ ಪ್ರಶಸ್ತಿಯಿಂದ ನನಗೆ ಸಂತೋಷವಾಗಿದೆ” ಎಂದರು.
ಕಾಂಗ್ರೆಸ್ ನಲ್ಲಿ ನಾಯಕತ್ವದ ಕುರಿತು ಗೊಂದಲಗಳು ಮುಂದುವರಿದಿರುವಾಗ ಅಜಾದ್ ಅವರಿಗೆ ಬಿಜೆಪಿ ಸರ್ಕಾರ ಪ್ರಶಸ್ತಿ ನೀಡಿದೆ. ಇದು ಕಾಂಗ್ರೆಸ್ ನ ಒಂದು ವರ್ಗದ ನಾಯಕ ಕಣ್ಣು ಕೆಂಪಾಗಿಸಿದ್ದು ಮಾತ್ರ ಸುಳ್ಳಲ್ಲ. ಯಾಕೆಂದರೆ, ಹಿರಿಯ ಸಿಪಿಎಂ ನಾಯಕ ಮತ್ತು ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಪ್ರಶಸ್ತಿ ನಿರಾಕರಿಸಿದ್ದನ್ನು ಉಲ್ಲೇಖಿಸಿ, ಆಜಾದ್ ಅವರ ಪಕ್ಷದ ಸಹೋದ್ಯೋಗಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, ” ಅವರು (ಬುದ್ಧದೇವ್ ಭಟ್ಟಾಚಾರ್ಯ) ಮಾಡಿದ್ದು ಸರಿ ಇದೆ. ಅವರು ಅಜಾದ್ ಆಗಲು ಬಯಸುತ್ತಾರೆ ಗುಲಾಮ್ ಅಲ್ಲ” ಎಂದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ನೀಡಿರುವ ಪ್ರಶಸ್ತಿ ಪಡೆದಿರುವ ಅಜಾದ್ ಅವರಿಗೆ ಟಾಂಗ್ ನೀಡಿದ್ದಾರೆ.




