March 22, 2026

ಹಿಮಪಾತಕ್ಕೆ ಸಿಲುಕಿ ಕೊಡಗಿನ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ

0
n3621548841645631473862e2c9385c7834b9e0de469bdf9310026966267a0ba858c8099b04bca32f02f58e.jpg

ಮಡಿಕೇರಿ: ಜಮ್ಮು- ಕಾಶ್ಮೀರದಲ್ಲಿ ಕೊಡಗು ಮೂಲದ ಯೋಧ ಹುತಾತ್ಮರಾದ ದುರ್ಘಟನೆ ನಡೆದಿದೆ. ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಎಂಬ ಯೋಧ ಹುತಾತ್ಮರಾಗಿದ್ದಾರೆ. ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಎಒಸಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ತಾಫ್ ಹುತಾತ್ಮರಾಗಿದ್ದಾರೆ. ಸದ್ಯ ಯೋಧನ ಕುಟುಂಬ ಕೇರಳದ‌ ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿದೆ.

ವೀರಾಜಪೇಟೆಯ ಮೀನುಪೇಟೆ ನಿವಾಸಿಗಳಾದ ದಿ. ಉಮ್ಮರ್ ಮತ್ತು ಆಶೀಯಾ ದಂಪತಿಗಳ ಪುತ್ರ ಇವರು. ಕೊಡಗಿನಲ್ಲಿ ಹುಟ್ಟಿ ಬೆಳೆದು , ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಅಲ್ತಾಫ್ ಅಹ್ಮದ್ ಅವರು 19 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು. ಎಒಸಿ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಲ್ತಾಫ್ ಅವರು ಕಾಶ್ಮೀರದಲ್ಲಿ ಕರ್ತವ್ಯಲ್ಲಿರುವಾಗು ಹಿಮಪಾತದಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸುವ ಕಾರ್ಯ ಭಾರತೀಯ ಸೇನೆಯಿಂದ ನಡೆದಿತ್ತಾದರೂ ಅದು ಫಲ ನೀಡದೆ ವೀರಮರಣವನ್ನಪ್ಪಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಅಲ್ತಾಫ್ ಅವರು ವಿರಾಜಪೇಟೆ ಸಮೀಪದ ಎಡಪಾಲದ ಹುಡುಗಿಯನ್ನು ವರಿಸಿದ್ದರು. ಅಲ್ತಾಫ್ ಅಹಮ್ಮದ್ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಂಡು ಸೇನೆಗೆ ಆಯ್ಕೆಗೊಂಡಿದ್ದರು. ದಿ. ಉಮ್ಮರ್ ಮತ್ತು ಆಶೀಯಾ ದಂಪತಿಗಳ ಮೂವರು ಮಕ್ಕಳ ಪೈಕಿ ಹಿರಿಯರಾದ ಆಲ್ತಾಫ್ ಅಹಮ್ಮದ್ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ಪತ್ನಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ. ಪತ್ನಿ ಹಾಗೂ ಮಕ್ಕಳು ಕೇರಳದ ಮಟ್ಟನೂರಿನಲ್ಲಿರುವ ಯೋಧ ಅಲ್ತಾಫ್ ಅಹಮದ್ ಅವರ ಸಹೋದರಿಯೊಂದಿಗೆ ನೆಲೆಸಿದ್ದಾರೆ. ತಾಯಿ ಆಶಿಯಾ ಅವರು ಸಮೀಪದ ಚೆನ್ನಯ್ಯನಕೋಟೆಯಲ್ಲಿ ನೆಲೆಸಿರುವ ಮತ್ತೋರ್ವ ಸಹೋದರಿಯೊಂದಿಗೆ ನೆಲೆಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ಧಾರೆ.

ಬುಧವಾರ ಬೆಳಿಗ್ಗೆ ಕೂಡ ಅಲ್ತಾಫ್ ಅಹಮದ್ ಅವರು ತಮ್ಮ ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಆಗಮಿಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!