ರಷ್ಯಾ-ಉಕ್ರೇನ್ ಉದ್ವಿಗ್ನತೆ: ಉಕ್ರೇನ್‌ನಿಂದ 242 ಭಾರತೀಯ ವಿದ್ಯಾರ್ಥಿಗಳು ವಾಪಸ್
ನವದೆಹಲಿ: ಹೆಚ್ಚುತ್ತಿರುವ ರಷ್ಯಾ-ಉಕ್ರೇನ್ ಉದ್ವಿಗ್ನತೆ ಮಧ್ಯೆ ಉಕ್ರೇನ್‌ನಿಂದ 242 ಭಾರತೀಯ ವಿದ್ಯಾರ್ಥಿಗಳು ಮಂಗಳವಾರ ಸಂಜೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ನಾಗರಿಕರನ್ನು ಕರೆತರಲು ಭಾರತ ಮುಂದಾಗಿದೆ.
ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತವು ಡ್ರೀಮ್‌ಲೈನರ್ B-787 ವಿಮಾನವನ್ನು ನಿಯೋಜಿಸಿದ್ದು, ಇದರಡಿಯಲ್ಲಿ ಉಕ್ರೇನ್‌ನ ಖಾರ್ಕಿವ್‌ನಿಂದ ದೆಹಲಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಉಕ್ರೇನ್‌ನಲ್ಲಿ ಓದುತ್ತಿರುವ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನೀರವ್ ಪಾಟೀಲ್, ‘ನಾನು ವಾಸಿಸುವ ಪ್ರದೇಶದ ಸುತ್ತಮುತ್ತ ಪರಿಸ್ಥಿತಿ ಸಾಮಾನ್ಯವಾಗಿದೆ. ವಿಶ್ವವಿದ್ಯಾನಿಲಯವು ಆನ್‌ಲೈನ್‌ನಲ್ಲಿ ಅಧ್ಯಯನವನ್ನು ಪ್ರಾರಂಭಿಸಿದೆ. ಆದ್ದರಿಂದ ಮೊದಲಿನಂತೆ ಹೆಚ್ಚು ಚಿಂತಿಸಬೇಕಾಗಿಲ್ಲ’ ಎಂದು ಹೇಳಿದರು.
ಮತ್ತೋರ್ವ ವಿದ್ಯಾರ್ಥಿ ಕೃಷ್ಣ, ‘ನಾನು ಉಕ್ರೇನ್-ರಷ್ಯಾ ಗಡಿಯಿಂದ 900 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದೇನೆ. ನಾವು ಸುಮಾರು ಐದರಿಂದ ಆರು ವಿದ್ಯಾರ್ಥಿಗಳು, ಗುಜರಾತ್ ನಿವಾಸಿಗಳು. ನಮ್ಮ ಪೋಷಕರು ಸಾಕಷ್ಟು ಚಿಂತಿತರಾಗಿದ್ದರು. ಇದರಿಂದಾಗಿ ನಾವು ಭಾರತಕ್ಕೆ ಮರಳಬೇಕಾಯಿತು’ ಎಂದರು.




