July 3, 2026

ಸನ್ಯಾಸಿಗಳ ಮೇಲೆ ಕಾರು ಹರಿದು ಒಂಬತ್ತು ಬೌದ್ಧ ಸನ್ಯಾಸಿಗಳು ಮೃತ್ಯು: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಕಾರು

0
image_editor_output_image-1704391713-1783078007785

ಬ್ಯಾಂಕಾಕ್: ಥೈಲ್ಯಾಂಡ್‌ನ ಈಶಾನ್ಯ ಭಾಗದ ಮುಕ್ದಹಾನ್ ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಬಾಲಕ ಕಾರು ಚಲಾಯಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 35 ಬೌದ್ಧ ಸನ್ಯಾಸಿಗಳು ಹಾಗೂ ಐವರು ಭಕ್ತರು ತೀರ್ಥಯಾತ್ರೆಯ ಅಂಗವಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಾಲಕ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಸನ್ಯಾಸಿಗಳ ಗುಂಪಿನ ಮೇಲೆ ಹರಿದಿದೆ. ಅಪಘಾತದಲ್ಲಿ ಬದುಕುಳಿದ ಸನ್ಯಾಸಿ ಫ್ರಾ ಸೋಂಪಾಂಗ್ ಅವರ ಪ್ರಕಾರ, ಎಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದಾಗ ಏಕಾಏಕಿ ಕಾರು ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವು ಸನ್ಯಾಸಿಗಳು ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು, ದೃಶ್ಯ ಅತ್ಯಂತ ಭಯಾನಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಬಳಿಕ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಸನ್ಯಾಸಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ವೇಳೆ ಬಾಲಕ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪೋಷಕರಿಗೆ ತಿಳಿಸದೆ ಕಾರಿನ ಕೀ ಪಡೆದು ವಾಹನ ಚಲಾಯಿಸಿದ್ದಾನೆ. ಕಾರು ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ಅಪಘಾತ ಸಂಭವಿಸಿತ್ತು. ಬಾಲಕ ವಿಶೇಷ ಚಿಕಿತ್ಸೆ ಅಗತ್ಯವಿರುವ ಮಗು ಎಂಬ ಮಾಹಿತಿಯೂ ಲಭ್ಯವಾಗಿದ್ದು, ವೈದ್ಯರು ಮತ್ತು ಕುಟುಂಬಸ್ಥರು ಆತನ ಆರೈಕೆ ಮಾಡುತ್ತಿದ್ದಾರೆ.

ಬೌದ್ಧ ಸನ್ಯಾಸಿಗಅತ್ಯಂತ ಗೌರವದಿಂದ ಕಾಣುವ ಥೈಲ್ಯಾಂಡ್‌ನಲ್ಲಿ ಈ ಘಟನೆ ವ್ಯಾಪಕ ಆಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಸನ್ಯಾಸಿಗಳಿಗೆ ಚಿಕಿತ್ಸೆ ನೀಡಲು ಮುಕ್ದಹಾನ್ ಆಸ್ಪತ್ರೆ ಸಾರ್ವಜನಿಕರಲ್ಲಿ ತುರ್ತು ರಕ್ತದಾನ ಮಾಡುವಂತೆ ಮನವಿ ಮಾಡಿದೆ. ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಪ್ರತಿಕ್ರಿಯಿಸಿ, ಈ ಘಟನೆ ರಸ್ತೆ ಸುರಕ್ಷತೆ ಹಾಗೂ ಮಕ್ಕಳ ಮೇಲಿನ ಪೋಷಕರ ನಿಗಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದು, ಅಪಘಾತದ ನಿಖರ ಕಾರಣ ಹಾಗೂ ಮುಂದಿನ ಕಾನೂನು ಕ್ರಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!