RSS, ಬಿಜೆಪಿಯಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಕೆಲಸ ಮಾಡಲು ಹುದ್ದೆಗೆ ತೊರೆದಪೊಲೀಸ್ ಕಾನ್ಸ್ಟೇಬಲ್
ಗಾಂಧಿನಗರ : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಬಿಜೆಪಿಯಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿ ಗುಜರಾತ್ ನ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಆದೇಸರ್ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ 32 ವರ್ಷದ ರಾಮ್ಗರ್ ಮೋಹನ್ ಗರ್, ಆಗಸ್ಟ್ 14, 2026 ರಂದು ಪೂರ್ವ ಕಚ್ ನ ಪೊಲೀಸ್ ವರಿಷ್ಠಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರ ಮತ್ತು ಹೇಳಿಕೆಗಳಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಮೋಹನ್ ಗರ್, ”ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬಾರದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ತಂಡದ ಭಾಗವಾಗಿ ಯುವಕರ ಬೇಡಿಕೆಗಳನ್ನು ಗೌರವಿಸಲು ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
RSS ಅನ್ನು ಬಲಪಡಿಸಲು ಮತ್ತು ಮೋದಿ ಸರ್ಕಾರವನ್ನು ಬೆಂಬಲಿಸಲು ತನ್ನ ಜೀವನವನ್ನು ಮುಡಿಪಾಗಿಡಲು ಉದ್ದೇಶಿಸಿರುವುದಾಗಿ ಅವರ ತಿಳಿಸಿದ್ದಾರೆ. 2029 ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೆ ಆಯ್ಕೆಯಾಗುವವರೆಗೂ ಬರಿಗಾಲಿನಲ್ಲಿಯೇ ಇರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕಚ್ ನ ರಾಪರ್ ತಾಲೂಕಿನ ಹಮೀರ್ಪಾರ ಗ್ರಾಮದವರಾದ ಮೋಹನ್ಗರ್ ಅವರು 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದು, 2019ರ ಬ್ಯಾಚ್ ನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಐವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಹೊಂದಿರುವ ಕೃಷಿ ಕುಟುಂಬದಿಂದ ಬಂದಿರುವ ಅವರು ವಿವಾಹಿತರಾಗಿದ್ದು, ಮೂವರು ಮಕ್ಕಳಿದ್ದಾರೆ.





