July 3, 2026

ಮಂಗಳೂರು: 23 ಲಕ್ಷ ರೂ.ನಗದು ಮತ್ತು  ಚಿನ್ನಾಭರಣದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

0
image_editor_output_image230783768-1783082258948

ಮಂಗಳೂರು: ಮಹಾರಾಷ್ಟ್ರದಿಂದ ಕೇರಳಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬವೊಂದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಸುಮಾರು 23 ಲಕ್ಷಕ್ಕೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಕಾರು ದರೋಡೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೇರಳದ ಕಣ್ಣೂರು ಮೂಲದ ನಿಮಿಲ್ ಆರ್.ಕೆ (37) ಹಾಗೂ ಕೃತ್ಯಕ್ಕೆ ಸಹಕರಿಸಿ ಆಶ್ರಯ ನೀಡಿದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಇರ್ಷಾದ್ (40) ಮತ್ತು ಮುಸ್ತಾಫ (49) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ಮಹಾರಾಷ್ಟ್ರದ ವಿಕಾಸ್ ಸುಬ್ಬರಾವ್ ಧನವಡೆ (44) ಎಂಬುವವರು ಜೂನ್ 29ರಂದು ನಸುಕಿನ ಜಾವ 2:45ರ ಸುಮಾರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಮೂಲಕ ಕೇರಳದ ಪಯ್ಯನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರಿನ ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6 ರಿಂದ 7 ಜನ ಮುಸುಕುಧಾರಿ ದರೋಡೆಕೋರರು ಇವರ ಕಾರನ್ನು ಅಡ್ಡಗಟ್ಟಿದ್ದಾರೆ. ತಲವಾರು ತೋರಿಸಿ ಜೀವಬೆದರಿಕೆ ಒಡ್ಡಿ, ವಿಕಾಸ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ಕಾರಿನಲ್ಲಿದ್ದ 20 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ, 2 ಮೊಬೈಲ್ ಫೋನ್‌ಗಳು ಹಾಗೂ 3 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ. 23,10,000 ಮೌಲ್ಯದ ಸೊತ್ತನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ತೀವ್ರ ಕಾರ್ಯಾಚರಣೆ – ಆರೋಪಿಗಳ ಬಂಧನ:
ಪ್ರಕರಣ ದಾಖಲಾದ ಬೆನ್ನಲ್ಲೇ ಸಕ್ರಿಯರಾದ ಪೊಲೀಸರು ಜೂನ್ 30ರಂದು ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡಗಾಡು ಪ್ರದೇಶದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿದ್ದ ಮಾರುತಿ ಡಿಝೈರ್ ಕಾರನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡಿದ್ದರು.
ತನಿಖೆಯನ್ನು ಚುರುಕುಗೊಳಿಸಿದ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡ ಜುಲೈ 2ರಂದು ಕೇರಳದ ಕಣ್ಣೂರು ಜಿಲ್ಲೆಯ ಚಾಲಾ ಎಂಬಲ್ಲಿನ ಆಸ್ಪತ್ರೆಯೊಂದರ ಬಳಿ ಪ್ರಮುಖ ಆರೋಪಿ ನಿಮಿಲ್‌ನನ್ನು ವಶಕ್ಕೆ ಪಡೆದಿದೆ. ಇದೇ ವೇಳೆ ಕೃತ್ಯಕ್ಕೆ ಆಶ್ರಯ ನೀಡಿದ ಇರ್ಷಾದ್‌ನನ್ನು ಕೊಡಗಿನ ಪೊನ್ನಂಪೇಟೆಯಲ್ಲಿ ಹಾಗೂ ಪ್ರಮುಖ ಆರೋಪಿಗಳಿಗೆ ಕಾರು ಒದಗಿಸಿ ಆಶ್ರಯ ನೀಡಿದ ಮುಸ್ತಾಫನನ್ನು ಮಡಿಕೇರಿಯ ಮೂರ್ನಾಡು ಜಂಕ್ಷನ್ ಬಳಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ 4 ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

13 ಆರೋಪಿಗಳಿಗಾಗಿ ತಲಾಶ್:
ಪ್ರಾಥಮಿಕ ವಿಚಾರಣೆಯ ಪ್ರಕಾರ ಈ ದರೋಡೆ ಸಂಚಿನಲ್ಲಿ ಒಟ್ಟು 16 ಆರೋಪಿಗಳು ಭಾಗಿಯಾಗಿದ್ದು, ಇದರಲ್ಲಿ 14 ಮಂದಿ ನೇರವಾಗಿ ಕೃತ್ಯ ಎಸಗಿದ್ದರೆ, ಇಬ್ಬರು ಆಶ್ರಯ ನೀಡಿದ್ದರು. ಸದ್ಯ 3 ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ 13 ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಆರೋಪಿಗಳೆಲ್ಲರೂ ಮಡಿಕೇರಿ ಹಾಗೂ ಕೇರಳ ಮೂಲದವರೆಂದು ತಿಳಿದುಬಂದಿದೆ. ದರೋಡೆಯಾದ ಚಿನ್ನಾಭರಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಉಳಿದ 3 ಕಾರುಗಳ ಪತ್ತೆ ಕಾರ್ಯ ಬಾಕಿ ಇದೆ.

ಮಂಗಳೂರು ನಗರದ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮತ್ತು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ ಕೆ. ಅವರ ನೇತೃತ್ವದಲ್ಲಿ, ಪಣಂಬೂರು, ಕಾವೂರು, ಮುಲ್ಕಿ, ಕಂಕನಾಡಿ, ಉರ್ವ ಠಾಣೆ ಹಾಗೂ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You may have missed

error: Content is protected !!