2013ರ ಪಾಟ್ನಾ ಗಾಂಧಿ ಮೈದಾನ ಸ್ಫೋಟ ಪ್ರಕರಣ:
9 ಮಂದಿ ಅಪರಾಧಿಗಳೆಂದು ತೀರ್ಪು
ಪಾಟ್ನಾ: 2013ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ 10 ಆರೋಪಿಗಳ ಪೈಕಿ ಒಂಬತ್ತು ಮಂದಿ ದೋಷಿ ಎಂದು ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ‘ಹುಂಕಾರ್’ ರ್ಯಾಲಿ ವೇಳೆ ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡರು.
ರ್ಯಾಲಿ ಸ್ಥಳದ ಸುತ್ತಲೂ ಆರು ಸ್ಫೋಟಗಳು ನಡೆದಿದ್ದರೆ, ಮೋದಿ ಭಾಷಣ ಮಾಡಿದ ವೇದಿಕೆಯಿಂದ 150 ಮೀಟರ್‌ಗಳ ಒಳಗೆ ಎರಡು ಬಾಂಬ್‌ಗಳು ಸ್ಫೋಟಗೊಂಡಿವೆ. ನಂತರ ರ್ಯಾಲಿ ಸ್ಥಳದ ಬಳಿ ನಾಲ್ಕು ಜೀವಂತ ಬಾಂಬ್‌ಗಳು ಪತ್ತೆಯಾಗಿವೆ.
ಬಿಹಾರ ಪೊಲೀಸರು ಇದನ್ನು ಭಯೋತ್ಪಾದಕ ದಾಳಿ ಎಂದು ಕರೆಯದಿದ್ದರೂ, ಆಗಿನ ಪೊಲೀಸ್ ಮಹಾನಿರ್ದೇಶಕ ಅಭಯಾನಂದ್ ಐಇಡಿ ಮತ್ತು ಟೈಮರ್‌ಗಳ ಬಳಕೆಯನ್ನು ಖಚಿತಪಡಿಸಿದ್ದರು. ಅಮೋನಿಯಂ ನೈಟ್ರೇಟ್, ಡಿಟೋನೇಟರ್‌ಗಳು, ಟೈಮರ್ ಸಾಧನ ಮತ್ತು ಕಬ್ಬಿಣದ ಮೊಳೆಗಳ ಬಳಕೆಯ ಬಗ್ಗೆಯೂ ಗುಪ್ತಚರ ಮೂಲಗಳು ಸುಳಿವು ನೀಡಿದ್ದವು.





