ಇಸ್ರೇಲ್ “ಪೆಗಾಸಸ್” ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಜ್ಞರ ಸಮಿತಿ ರಚನೆ
ನವದೆಹಲಿ: ಇಸ್ರೇಲ್ ಕಂಪನಿಯ ಗೂಢಚರ್ಯ ತಂತ್ರಾಂಶ “ಪೆಗಾಸಸ್” ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು ಸೇರಿದಂತೆ ದೇಶದ 300ಕ್ಕೂ ಅಧಿಕ ಹೆಚ್ಚು ಗಣ್ಯರ ಮೊಬೈಲ್ ಫೋನ್ ಗೆ ಕನ್ನ ಹಾಕಿದ ಆರೋಪದ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ತಜ್ಞರ ಸಮಿತಿಯನ್ನು ರಚಿಸಿದೆ.
ವೈಯಕ್ತಿಕ ನೆಲೆಯಲ್ಲಿ ತಾರತಮ್ಯ ಎಸಗುವ ಬೇಹುಗಾರಿಕೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ(ಅಕ್ಟೋಬರ್ 27) ಸಮಿತಿ ರಚನೆ ವೇಳೆ ಅಭಿಪ್ರಾಯವ್ಯಕ್ತಪಡಿಸಿದೆ. ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ.
ಪೆಗಾಸಸ್ ಕುರಿತು ತನಿಖೆ ನಡೆಸಲು ನಾವು ಹೆಸರಾಂತ ತಜ್ಞರನ್ನು ಸಮಿತಿಗೆ ಆಯ್ಕೆ ಮಾಡಿದ್ದೇವೆ. ಸೈಬರ್ ಸೆಕ್ಯುರಿಟಿ ಮತ್ತು ವಿಧಿವಿಜ್ಞಾನ ಹಿನ್ನೆಲೆ ಹೊಂದಿರುವವರನ್ನು ತಜ್ಞರನ್ನಾಗಿ ಆಯ್ಕೆ ಮಾಡಲಿದ್ದೇವೆ. ಮೂವರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಅಲೋಕ್ ಜೋಶಿ ಕೂಡಾ ಸದಸ್ಯರಲ್ಲಿ ಒಬ್ಬರಾಗಿದ್ದಾರೆ ಎಂದು ಸಿಜೆಐ ತಿಳಿಸಿದ್ದಾರೆ.