March 21, 2026

ಚಿಕ್ಕಮಗಳೂರು: ಜಾತ್ರೆಯಲ್ಲಿ ಎತ್ತಿನಗಾಡಿ ಹರಿದು ಓರ್ವ ಸಾವು

0
IMG_20220213_212140.jpg

ಚಿಕ್ಕಮಗಳೂರು: ವೇಗವಾಗಿ ಹೋಗುತ್ತಿದ್ದ ಎತ್ತಿನಗಾಡಿ ಹರಿದು ಎತ್ತುಗಳು ಗುದ್ದಿದ ಪರಿಣಾಮವಾಗಿ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ.

ಗೌರಪುರ ಗ್ರಾಮ ಪಂಚಾಯತಿಯಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಕಣಚಾರಿ(48) ಮೃತ ದುರ್ದೈವಿ. ನಿನ್ನೆ ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ಅದ್ಧೂರಿ ಅಂತರಗಟ್ಟೆ ಜಾತ್ರೆ ನಡೆದಿತ್ತು. ಸಂಭ್ರಮದ ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಈ ಜಾತ್ರೆಯಲ್ಲಿ ನೂರಾರು ಹಳ್ಳಿಗಳಿಂದ ಎತ್ತಿನಗಾಡಿಯನ್ನ ಹೊಡೆದುಕೊಂಡು ಬರುವುದು ಹಿಂದಿನಿಂದಲೂ ಬಂದಿರುವ ರೂಢಿ. ಇದೇ ರೀತಿ ಮೊನ್ನೆ ಸಂಜೆ ಭಕ್ತರು ಎತ್ತಿನಗಾಡಿಯನ್ನು ರಭಸದಿಂದ ಹೊಡೆದುಕೊಂಡು ಬರುವ ಸಂದರ್ಭದಲ್ಲಿ ಹೆದರಿದ ಎತ್ತುಗಳು ಬೈಕ್ನಲ್ಲಿ ಹೋಗುತ್ತಿದ್ದ ಜಕಣಾಚಾರಿ ಬೆನ್ನಿಗೆ ಗುದ್ದಿದೆ.

ಎತ್ತುಗಳು ಗುದ್ದಿದ ಪರಿಣಾಮ ಜಕಣಾಚಾರಿ ಹಾರಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಕೂಡಲೇ ವಿಚಾರ ತಿಳಿದ ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜಕಣಚಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ರೈತರು ಎತ್ತಿನಗಾಡಿಗಳನ್ನ ಉತ್ಸಾಹಭರಿತವಾಗಿ ಕೇಕೆ ಹಾಕಿಕೊಂಡು ಓಡಿಸುತ್ತಿದ್ದ ಸಂದರ್ಭದಲ್ಲಿ ಮುಗ್ಗರಿಸಿ ಬಿದ್ದು ಹಲವು ರಾಸುಗಳು ಕೂಡ ಗಂಭೀರ ಗಾಯಗೊಂಡಿವೆ.

Leave a Reply

Your email address will not be published. Required fields are marked *

error: Content is protected !!