800ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ಘೋಷಿಸಿದ ಮ್ಯಾನ್ಮಾರ್
ಯಾಂಗೂನ್: ಮ್ಯಾನ್ಮಾರ್‌ನ ರಾಷ್ಟ್ರೀಯ ಐಕ್ಯತಾ ದಿನದ ಸ್ಮರಣಾರ್ಥವಾಗಿ ರಾಜಧಾನಿ ನಾಯ್ಪಿಟಾವ್‌ನಲ್ಲಿ ಸೇನಾ ಶಕ್ತಿ ಪ್ರದರ್ಶನ ಮತ್ತು ಪರೇಡ್ ನಡೆಸಲಾಗುತ್ತಿದ್ದು, 800ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಅಲ್ಲಿನ ಸೇನೆ ಶನಿವಾರ ಘೋಷಿಸಿದೆ.
ಸೇನಾಧಿಕಾರಿಗಳ ಸಮಿತಿ ‘ಜುಂಟಾ’ದ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಅವರು ‘ಕ್ಷಮಾದಾನದ ಆದೇಶ’ ಹೊರಡಿಸಿದ್ದಾರೆ. ಅದರಂತೆ, ದೇಶದ 75ನೇ ಐಕ್ಯತಾ ದಿನ ಆಚರಣೆಯ ಅಂಗವಾಗಿ 814 ಕೈದಿಗಳಿಗೆ ಕ್ಷಮಾದಾನ ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕ್ಷಮಾದಾನ ಪಡೆದವರಲ್ಲಿ ಹೆಚ್ಚಿನವರು, ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಯಾಂಗೂನ್‌ನ ಜೈಲುಗಳಲ್ಲಿ ಇರುವವರಾಗಿದ್ದಾರೆ ಎಂದು ‘ಜುಂಟಾ’ದ ವಕ್ತಾರ ಜಾವ್ ಮಿನ್ ಟುನ್ ತಿಳಿಸಿದ್ದಾರೆ. ಆದರೆ, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಸೆರೆವಾಸದಲ್ಲಿರುವ, ಆಸ್ಟ್ರೇಲಿಯಾ ಮೂಲದ ಆರ್ಥಿಕ ಸಲಹೆಗಾರ ಸೀನ್ ಟರ್ನಲ್ ಅವರು ಬಿಡುಗಡೆಯಾಗಲಿದ್ದಾರೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.




