ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ. ರವಿ ವಾಗ್ದಾಳಿ
ಹಾವೇರಿ: ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಹಿಂದೆ ಸರಿದು ದಶಕ ಕಳೆದಿವೆ. ಈಗಿರುವ ಕಾಂಗ್ರೆಸ್, ಆಗಿನ ಕಾಂಗ್ರೆಸ್ ಗೆ ಸಂಬಂಧವೇ ಇಲ್ಲ. ಈಗಿರುವ ಕಾಂಗ್ರೆಸ್ ತುಕಡೆ ಗ್ಯಾಂಗ್ ಗಳ ನೇತಾರರನ್ನು ನಾಯಕರನ್ನಾಗಿ ಮಾಡಿದೆ. ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ ಕಾಂಗ್ರೆಸ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಹಾನಗಲ್ಲ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೈಬ್ರೀಡ್ ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಗೆ ಅಸಹನೆ ಕಾಡುತ್ತಿದೆ. ತನ್ನನ್ನು ಬಿಟ್ಟು ಅಧಿಕಾರದಲ್ಲಿ ಯಾರೂ ಇರಬಾರದು ಎಂಬ ಅಸಹನೆ ಅವರದು. ನಾವು ಯಾವತ್ತೂ ದೇಶಕ್ಕೆ ಹಾನಿಯಾಗುವ ವಿಚಾರವನ್ನು ಬೆಂಬಲಿಸಲಿಲ್ಲ ಎಂದರು.
ಭಯೋತ್ಪಾದಕರನ್ನು ಬೆಂಬಲಿಸಲಿಲ್ಲ. ನೈತಿಕ ಬೆಂಬಲದ ಹೆಸರಿನಲ್ಲಿ ದೇಶ ವಿರೋಧಿಗಳನ್ನು ಬೆಂಬಲಿಸುವ ಕೆಲಸ ಮಾಡಿಲ್ಲ. ದೇಶದೊಳಗಿದ್ದು ದೇಶ ಕುಗ್ಗಿಸುವ, ಚೀನಾ, ಪಾಕಿಸ್ತಾನ ಮನೋಭಾವ ಬೆಂಬಲಿಸುವ ಕೆಲಸ ಮಾಡಿಲ್ಲ. ಆದರೀಗ ಕಾಂಗ್ರೆಸ್ ಗೆ ಅಸಹನೆ ಕಾಡುತ್ತಿದೆ. ಹೊರಗಿನವರು ಯಾರೂ ಪ್ರಧಾನಿಯಾಗಿರಬಾರದು ಎಂಬ ಅಸಹನೆ ಅವರದ್ದು. ಚಹಾ ಮಾರುವ ಹುಡುಗ ಪ್ರಧಾನಿಯಾಗಿದ್ದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಹಿಂದುಳಿದ ನಾಯಕ ಎಂದು ಬಿಂಬಿಸುವುದಲ್ಲಿ ಮೋದಿಯವರಂತ ಹಿಂದುಳಿದ ನಾಯಕ ಬೇಕಾ? ಆದರೆ ಅವರು ಎಂದು ಜಾತಿ ರಾಜಕಾರಣ ಮಾಡಲಿಲ್ಲ ಎಂದರು.




