ಸುಳ್ಯ: ನಗರದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಕೆಸರು ಮಿಶ್ರಿತ ನೀರು ಸರಬರಾಜು
ಸುಳ್ಯ: ನಗರ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಗರ ಪಂಚಾಯತ್ ವತಿಯಿಂದ ಸರಬರಾಜಾಗುವ ಕುಡಿಯುವ ನೀರು ಪೂರ್ತಿ ಕೆಸರು ಮಿಶ್ರಿತವಾಗಿದ್ದು, ಕೆಂಪು ಬಣ್ಣದ ನೀರು ಬರುತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಪಂಚಾಯತ್ ನಲ್ಲಿಗಳ ಮೂಲಕ ಸಾರ್ವಜನಿಕರಿಗೆ ಕುಡಿಯಲು ಮತ್ತು ಇತರ ಬಳಕೆಗೆ ನಗರಕ್ಕೆ ಸರಬರಾಜಾದ ಕೆಂಪು ಬಣ್ಣದ ನೀರು ಶುದ್ಧೀಕರಣ ಮಾಡಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಪೂರ್ತಿ ಶುದ್ಧೀಕರಣ ಮಾಡಿ ಸರಬರಾಜು ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆಗ ನೀರು ಸರಬರಾಜು ವ್ಯತ್ಯಯ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನ.ಪಂ. ನಿರ್ಲಕ್ಷ್ಯ; ಶರೀಫ್ ಕಂಠಿ, ನಗರ ಪಂಚಾಯತ್ ಸದಸ್ಯ:
ನೀರನ್ನು ಸಮರ್ಪಕವಾಗಿ ಶುದ್ಧೀಕರಣ ಮಾಡದೆ ಕೆಸರು ಮಿಶ್ರಿತ ನೀರು ಸರಬರಾಜು ಮಾಡಿರುವುದು ನಗರ ಪಂಚಾಯತ್ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ನಗರ ಪಂಚಾಯತ್ ವಿಪಕ್ಷ ಸದಸ್ಯ ಶರೀಫ್ ಕಂಠಿ ಹೇಳಿದ್ದಾರೆ. ಕೆಸರು ಮಿಶ್ರಿತ ನೀರು ಕುಡಿಯಲು ಮತ್ತು ಇತರ ಅಗತ್ಯಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದೆ. ಗಾಂಧಿನಗರದ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕಾರ್ಯಾಚರಿಸುತ್ತಿಲ್ಲ. ಹಲವು ಬಾರಿ ನಗರ ಪಂಚಾಯತ್ ಗೆ ಹೇಳಿದರೂ ಅದನ್ನು ಸರಿಪಡಿಸಿಲ್ಲ ಎಂದು ಶರೀಫ್ ಕಂಠಿ ಹೇಳಿದ್ದಾರೆ.
ಈ ಎಲ್ಲ ಘಟನೆಗಳಿಂದ ಸುಳ್ಯದ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




