ಕಾಲೇಜು ಕ್ಯಾಂಪಸ್‌ನಲ್ಲಿ ಕುಸಿದು ಬಿದ್ದು ಯುವಕ ಮೃತ್ಯು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು ಕ್ಯಾಂಪಸ್‌ನಲ್ಲಿ ಎಂದಿನಂತೆ ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿಯೊಬ್ಬ ಹಠಾತ್ ಹೃದಯಾಘಾತದಿಂದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯುವ ಪೀಳಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ಪ್ರಕರಣಗಳು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೂಲದ ಮಾದೇಶ್ ಮೃತಪಟ್ಟ ದುರ್ದೈವಿ ವಿದ್ಯಾರ್ಥಿ. ಇವರು ಮೈಸೂರಿನಲ್ಲಿ ತಮ್ಮ ಅಕ್ಕನ ಮನೆಯಲ್ಲಿ ವಾಸವಿದ್ದುಕೊಂಡು ಮರಿಮಲ್ಲಪ್ಪ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶುಕ್ರವಾರ ಎಂದಿನಂತೆ ಕಾಲೇಜಿಗೆ ಬಂದಿದ್ದ ಮಾದೇಶ್, ಕ್ಯಾಂಪಸ್ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ. ವಿದ್ಯಾರ್ಥಿ ಹಠಾತ್ ನೆಲಕ್ಕೆ ಉರುಳಿದ್ದನ್ನು ಕಂಡು ಗಾಬರಿಗೊಂಡ ಸಹಪಾಠಿಗಳು ಹಾಗೂ ಕಾಲೇಜು ಸಿಬ್ಬಂದಿ ತಕ್ಷಣವೇ ಧಾವಿಸಿ, ಕಾಲೇಜು ಮಂಡಳಿಯ ವಾಹನದ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




