ಮಾಜಿ ಮುಖ್ಯಮಂತ್ರಿ ಪುತ್ರನಿಗೆ ಬಿಜೆಪಿ ಯಿಂದ ತಪ್ಪಿದ ಟಿಕೆಟ್:
ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ
ಪಣಜಿ: ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಶುಕ್ರವಾರ ಬಿಜೆಪಿ ತೊರೆದಿದ್ದಾರೆ.
ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿಯಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಉತ್ಪಲ್ ಪರಿಕ್ಕರ್ ಅವರು ಘೋಷಿಸಿದ್ದಾರೆ.
“ನನಗೆ ಬೇರೆ ಆಯ್ಕೆಯಿಲ್ಲ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನಾನು ಪಣಜಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ” ಎಂದು ಉತ್ಪಲ್ ಪರಿಕ್ಕರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜೀನಾಮೆ ಔಪಚಾರಿಕವಾಗಿದೆ. ಆದರೆ ಬಿಜೆಪಿ ಯಾವಾಗಲೂ ನನ್ನ ಹೃದಯದಲ್ಲಿರುತ್ತದೆ. ಇದು ನನಗೆ ಕಷ್ಟದ ಆಯ್ಕೆ, ಗೋವಾದ ಜನರಿಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ, ನನ್ನ ರಾಜಕೀಯ ಭವಿಷ್ಯದ ಬಗ್ಗೆ ಯಾರೂ ಚಿಂತಿಸಬೇಡಿ, ಗೋವಾದ ಜನ ಅದನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮನೋಹರ್ ಪರಿಕ್ಕರ್ ಅವರು ದೀರ್ಘಕಾಲ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದ ಆಡಳಿತರೂಢ ಬಿಜೆಪಿ ಹಾಲಿ ಶಾಸಕ ಅಟಾನಾಸಿಯೊ ಮಾನ್ಸೆರೇಟ್ ಅವರನ್ನು ಕಣಕ್ಕಿಳಿಸಿದೆ.
ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.




