ತನ್ನ ಮದುವೆಗಾಗಿ ಎಸ್‌ಬಿಐ ಬ್ಯಾಂಕ್‌ನಿಂದ ಹಣ ಕಳ್ಳತನ:
ಆರೋಪಿಯ ಬಂಧನ
ಹುಬ್ಬಳ್ಳಿ: ನಗರದ ಕೊಪ್ಪಿಕರ್ ರಸ್ತೆಯ ಎಸ್‌ಬಿಐ ಬ್ಯಾಂಕ್‌ನಿಂದ ಹಣ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ ಪ್ರವೀಣಕುಮಾರ, ಜ. 21ಕ್ಕೆ ನಿಗದಿಯಾಗಿದ್ದ ತನ್ನ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುವುದಕ್ಕಾಗಿ ಕೃತ್ಯ ಎಸಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ವಿಜಯಪುರದವನಾದ ಆರೋಪಿ ಪಿಯುಸಿವರೆಗೆ ಓದಿದ್ದ. ಮೈಸೂರಿನ ಊಟಿ ರಸ್ತೆಯಲ್ಲಿರುವ ಟಿವಿಎಸ್ ಷೋರೂಂನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ವಿವಿಧ ಕಾರಣಗಳಿಗಾಗಿ ತನ್ನ ಸ್ನೇಹಿತರಿಂದ ಸುಮಾರು ₹7 ಲಕ್ಷದವರೆಗೆ ಸಾಲ ಮಾಡಿಕೊಂಡಿದ್ದ. ಇದೇ ಸಂದರ್ಭದಲ್ಲಿ ಆತನ ಮದುವೆಯೂ ನಿಗದಿಯಾಗಿತ್ತು. ಸಾಲಗಾರರ ಕಾಟದ ಜೊತೆಗೆ, ಮದುವೆ ಖರ್ಚಿಗೆ ಹಣವಿಲ್ಲದಿದ್ದರಿಂದ ಬ್ಯಾಂಕ್ ಕಳ್ಳತನಕ್ಕೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದರು.
ಗ್ರಾಹಕನ ಸೋಗಿನಲ್ಲಿ ಜ.18ರಂದು ಮಧ್ಯಾಹ್ನ ಬ್ಯಾಂಕ್‌ಗೆ ಬಂದಿದ್ದ ಆರೋಪಿ, ಅಲ್ಲಿನ ಮ್ಯಾನೇಜರ್ ಮತ್ತು ಕ್ಯಾಷಿಯರ್‌ಗೆ ಚಾಕುವಿನಿಂದ ಬೆದರಿಸಿದ್ದ. ನಂತರ, ₹6.39 ಲಕ್ಷ ಹಣವನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗುತ್ತಿದ್ದ ಆತನನ್ನು ಇಬ್ಬರು ಕಾನ್‌ಸ್ಟೆಬಲ್‌ಗಳು ಬೆನ್ನತ್ತಿ ಹಿಡಿದಿದ್ದರು.




