February 4, 2026

ಉಪ್ಪಿನಂಗಡಿ: ಅಂಗಡಿಗೆ ಬೆಂಕಿ ಹಾಕಿದ ಪ್ರಕರಣ:
ಆರೋಪಿಯ ಪತ್ತೆ ಹಚ್ಚಿದ ಪೊಲೀಸರು

0
arrest.jpg

ಉಪ್ಪಿನಂಗಡಿ: ಮಾರ್ಚ್‌ನಲ್ಲಿ ಇಳಂತಿಲ ಗ್ರಾಮದ ನೇಜಿಗಾರ್ ಎಂಬಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಇಳಂತಿಲದ ಅಂಡೆತ್ತಡ್ಕದಲ್ಲಿ ತಲವಾರು ದಾಳಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಜಯರಾಮ ಗೌಡ(21) ಎಂಬಾತನೇ ಈ ಪ್ರಕರಣದ ಆರೋಪಿಯಾಗಿದ್ದಾನೆ.

ಕಳೆದ ಡಿಸೆಂಬರ್‌ನಲ್ಲಿ ಅಂಡೆತ್ತಡ್ಕದಲ್ಲಿ ಮುಸ್ಲಿಂ ಯುವಕರ ಮೇಲೆ ನಡೆದ ತಲವಾರು ದಾಳಿಗೆ ಸಂಬಂಧಿಸಿ ಪ್ರಮುಖ ಆರೋಪಿಯಾಗಿರುವ ಜಯರಾಮ ಗೌಡ ಎಂಬಾತ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈತನನ್ನು ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ಜ.11ರಂದು ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಸಂದರ್ಭ ಈತ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಬಾಯ್ದಿಟ್ಟಿದ್ದಾನೆ.

ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನೆಂಗಳ ಪ್ರಯಾಣಿಕರ ತಂಗುದಾಣಕ್ಕೆ ಹೊಂದಿಕೊಂಡಿರುವ ಗ್ರಾ.ಪಂ. ಅಧೀನದ, ಇರ್ಪಾದ್ ಎಂಬವರಿಗೆ ಸೇರಿದ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟದ ಅಂಗಡಿಗೆ 2021ರ ಮಾ.5ರಂದು ತಡರಾತ್ರಿ ಬೆಂಕಿ ಹಚ್ಚಲಾಗಿತ್ತು. ಇದರಿಂದ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಅವರಿಗೆ ಸುಮಾರು 50 ಸಾವಿರ ರೂ. ಗೂ ಅಧಿಕ ನಷ್ಟವುಂಟಾಗಿತ್ತು. ಅದೇ ದಿನ ಪೆದಮಲೆ ಚಡವು ಎಂಬಲ್ಲಿ ರಸ್ತೆ ಬದಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹನೀಫ್ ಎಂಬವರಿಗೆ ಸೇರಿದ ಹಣ್ಣಿನ ಅಂಗಡಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಬಗ್ಗೆ ಇರ್ಷಾದ್ ಅವರು ಮಾತ್ರ ಪೊಲೀಸ್ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದೀಗ ಈ ಪ್ರಕರಣದಲ್ಲಿ ಜಯರಾಮ ಗೌಡ ಹಾಗೂ ಇನ್ನೋರ್ವ ಆರೋಪಿಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಜಯರಾಮ ಗೌಡನನ್ನು ಗುರುವಾರ ಅಂಗಡಿಯ ಬಳಿ ಕರೆ ತಂದ ಪೊಲೀಸರು ಸ್ಥಳ ಮಹಜರು ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!