February 4, 2026

ತೆಕ್ಕಾರು: ಪ್ರಯಾಣಿಕರಿಗೆ ಮುನ್ಸೂಚನೆ ನೀಡದೆ ರಸ್ತೆ ಬಂದ್ ಮಾಡಿದ ಗುತ್ತಿಗೆದಾರ

0
IMG-20220108-WA0026.jpg

ಉಪ್ಪಿನಂಗಡಿ: ಅಜಿಲಮೊಗರಿನಿಂದ ಬಾಜಾರು- ಸರಳೀಕಟ್ಟೆಯಾಗಿ ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮರು ಡಾಮರೀಕರಣ ನಡೆಯುತ್ತಿದ್ದು, ಗುತ್ತಿಗೆದಾರರು ಯಾವುದೇ ಪೂರ್ವ ಸೂಚನೆಯನ್ನೂ ನೀಡದೇ ಏಕಾಏಕಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ರಸ್ತೆಡಾಮರೀಕರಣ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿಯಿಲ್ಲದ್ದರಿಂದ ಆ ಭಾಗಕ್ಕೆ ತೆರಳುವ ವಾಹನ ಸವಾರರು ಅರ್ಧ ರಸ್ತೆಯಲ್ಲೇ ಅತಂತ್ರ ಸ್ಥಿತಿ ತಲುಪುವ ಸ್ಥಿತಿ ಶನಿವಾರ ಉಂಟಾಗಿದ್ದು, ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಉಪ್ಪಿನಂಗಡಿಯಿಂದ ಪೆದಮಲೆಯಾಗಿ ಸರಳೀಕಟ್ಟೆ- ಬಾಜಾರು- ಅಜಿಮೊಗರುವಾಗಿ ಬಂಟ್ವಾಳಕ್ಕೆ ಸಂಪರ್ಕರಸ್ತೆಯಿದ್ದು, ಈ ರಸ್ತೆಯ ಮರುಡಾಮರು ಕಾಮಗಾರಿಗೆ ಪಿಎಂಜಿಎಸ್ ಪ್ರೋತ್ಸಾಹ ನಿಧಿಯಿಂದ 1.25ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಅಜಿಲಮೊಗರಿನಿಂದ ಉಪ್ಪಿನಂಗಡಿ ಭಾಗಕ್ಕೆ ಬರುವ ರಸ್ತೆಗೆ 10 ಕಿ.ಮೀ.ನಷ್ಟು ಡಾಮರು ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಆದರೆ ಶನಿವಾರ ದಿನ ಅಜಿಲಮೊಗರು ಮಸೀದಿ ಬಳಿ ಇರುವ ಸೇತುವೆಯ ಬಳಿ ರಸ್ತೆಯನ್ನು ಎರಡೂ ಕಡೆ ಬಂದ್ ಮಾಡಿ ಡಾಮರು ಕಾಮಗಾರಿ ನಡೆಸಲಾಯಿತು. ಇಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದಾಗಲೀ, ಕಾಮಗಾರಿಗಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂಬುದಾಗಿಯಾಗಲೀ ಯಾವುದೇ ನಾಮಫಲಕವನ್ನು ಗುತ್ತಿಗೆದಾರರು ಅಳವಡಿಸಿರಲಿಲ್ಲ. ಇದರಿಂದಾಗಿ ಆ ದಾರಿಯಲ್ಲಿ ಬಂದ ವಾಹನ ಸವಾರರು ರಸ್ತೆ ಬಂದ್ ಆಗಿದ್ದರಿಂದ ಒಂದೋ ಬಂದ ದಾರಿಯಲ್ಲೇ ವಾಪಸ್ ಹೋಗಬೇಕಿತ್ತು. ಇಲ್ಲದಿದ್ದಲ್ಲಿ ಕಾಮಗಾರಿ ಸಂಪೂರ್ಣವಾಗಿ ಅದು ವಾಹನ ಸಂಚಾರಕ್ಕೆ ಯೋಗ್ಯವಾಗುವವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೇಲವೇ ನಿಮಿಷದ ಅವಧಿಯಲ್ಲಿ ಆ ದಾರಿಯಲ್ಲಿ ಕಾರಿನಲ್ಲಿ ಅಜಿಲಮೊಗರಿಗೆ ತೆರಳಿದವರು 10 ನಿಮಿಷ ಬಿಟ್ಟು ಉಪ್ಪಿನಂಗಡಿಗೆ ಹಿಂದುರುಗಿ ಬರಬೇಕಾದರೆ ಇಲ್ಲಿ ರಸ್ತೆ ಬಂದ್ ಮಾಡಿದ್ದರಿಂದಾಗಿ ಸುತ್ತುಬಳಸಿ ಪ್ರಯಾಣಿಸುವಂತಾಗಿದೆ.

ರಸ್ತೆಯೊಂದನ್ನು ಏಕಾಏಕಿ ಬಂದ್ ಮಾಡುವಂತಿಲ್ಲ. ಕಾಮಗಾರಿಗೆ ರಸ್ತೆ ಬಂದ್ ಮಾಡುವ ಅವಶ್ಯಕತೆ ಇದ್ದರೂ, ಜಿಲ್ಲಾಧಿಕಾರಿಯವರ ಅನುಮತಿ ಪಡೆದು, ಪತ್ರಿಕೆಯಲ್ಲಿ ಪ್ರಕಟನೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಬದಲೀ ದಾರಿಯ ಬಗ್ಗೆ ತಿಳಿಯಪಡಿಸುವುದು ಸಂಬಂಧಿತ ಇಲಾಖೆಯ ಕರ್ತವ್ಯ. ಅಲ್ಲದೇ, ಗುತ್ತಿಗೆದಾರರೂ ಕಾಮಗಾರಿ ಸ್ಥಳದಲ್ಲಿ ನಾಮಫಲಕವನ್ನೂ ಅಳವಡಿಸಬೇಕು. ಆದರೆ ಇಲ್ಲಿ ಮಾತ್ರ ಕಾಮಗಾರಿ ನೆಪದಲ್ಲಿ ಏಕಾಏಕಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ವಾಹನ ಸಂಚಾರಕ್ಕೆ ಅಡಚಣೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ, ಗುತ್ತಿಗೆದಾರರು ಸರ್ವಾಧಿಕಾರ ಧೋರಣೆ ಅನುಸರಿಸಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!