ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಮೃತ್ಯು
ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ನಡೆದಿದೆ.
ನಳ್ಳಿ ನೀರಿಗೆ ಚರಂಡಿ ನೀರು ಸೇರ್ಪಡೆ ಆಗಿರುವ ಕಾರಣ ತಲುಷಿತ ನೀರು ಪೂರೈಕೆ ಮಾಡಲಾಗಿದೆ. ಕಲುಷಿತ ನೀರು ಸೇವನೆ ಮಾಡಿರುವ ಗ್ರಾಮದ ನಿವಾಸಿಗಳು ಸಾವನ್ನಪ್ಪಿದ್ದಾರೆ. ಯರಗಲ್ ಗ್ರಾಮದ ಗುರುರಾಜ್ ಬಸವರಾಜ ಮಳಗಿ (15) ಹಾಗೂ ನೀಲಮ್ಮ ನಾರಾಯಣಪ್ಪ ಬೆನಕಣ್ಣವರ (65) ಮೃತಪಟ್ಟಿದ್ದಾರೆ. ನಿನ್ನೆ ಹಾಗೂ ಇಂದು ಗುರುರಾಜ್ ಹಾಗೂ ನೀಲಮ್ಮ ಮೃತಪಟ್ಟಿದ್ದಾರೆ.
ಅಲ್ಲದೆ, ವಾಂತಿ ಬೇದಿಯಿಂದ ಗ್ರಾಮದ ಎಂಟು ಜನರು ಬಳಲುತ್ತಿದ್ದಾರೆ. ಎಂಟು ಜನರಿಗೆ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಳಚೆ ನೀರು ಕುಡಿವ ನಲ್ಲಿಗೆ ನೀರಿಗೆ ಸಂಪರ್ಕ ಹೊಂದಿದರೂ ಎಚ್ಚೆತ್ತುಕೊಳ್ಳದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಎಂದು ಆಕ್ರೋಶ ವ್ಯಕ್ತವಾಗಿದೆ. ಆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಗಲ್ ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮದಲ್ಲಿ ಆರೋಗ್ಯಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ.
ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಂ.ಎಸ್. ಪಾಟೀಲ ನೇತೃತ್ವದ ತಂಡದಿಂದ ಆರೋಗ್ಯ ತಪಾಸಣೆ ಮಾಡಲಾಗಿದೆ. ಮನೆ ಮನೆಗೂ ನಳ್ಳಿ ನೀರು ಕೊಡುವ ಯೋಜನೆ ಅಸಮರ್ಪಕ ಜಾರಿಯೇ ದುರಂತಕ್ಕೆ ಕಾರಣ. ಸರಿಯಾಗಿ ಕಾಮಗಾರಿ ಮಾಡದೇ ನಲ್ಲಿ ಸಂಪರ್ಕ ಪಡೆದ ಹಿನ್ನೆಲೆ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.




