ಮಾಡೆಲ್‌ನಿಂದ ಬ್ಲ್ಯಾಕ್‌ಮೇಲ್ ಆರೋಪ: ಯುವ ಉದ್ಯಮಿ ಆತ್ಮಹತ್ಯೆ
ಲಕ್ನೋ: ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು 28 ವರ್ಷದ ಉದ್ಯಮಿ ಶಿವ ಶರ್ಮಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿಯ ತಾಯಿ ರಂಜನಾ ಶರ್ಮಾ, ಆತನ ಗೆಳತಿ ಮಾಡೆಲ್ ಶ್ರದ್ಧಾ ದುಬೆ ವಿರುದ್ಧ ಕೊಲೆ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದಾರೆ.
ಲಕ್ನೋದಲ್ಲಿ ಅಕ್ಟೋಬರ್ 9ರಂದು ಈ ಘಟನೆ ನಡೆದಿದೆ. ಉದ್ಯಮಿ ಶಿವ ಶರ್ಮಾ ಗೆಳತಿಯ ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಡೆಲ್ ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವಿಯಾಗಿದ್ದ ಶ್ರದ್ಧಾ ದುಬೆ ಪ್ರಿಯಕರನ ಈ ಅನುಮಾನಾಸ್ಪದ ಸಾವು ನಗರದ ತುಂಬಾ ಸದ್ದು ಮಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಹಿಂದಿನ ಕಾರಣದ ಕುರಿತು ಹಲವಾರು ಚರ್ಚೆಗಳು ಎದ್ದಿವೆ. ಈ ನಡುವೆ ಮೃತ ಉದ್ಯಮಿ ತಾಯಿಯ ಆರೋಪ ಈ ಇಡೀ ತನಿಖೆಯ ದಿಕ್ಕನ್ನೇ ಬದಲಿಸಿದೆ.
ಮಗನ ದೇಹದ ಮೇಲೆ ಹಲವು ಗಾಯಗಳಿದ್ದವು. ಸಿಗರೇಟಿನಿಂದ ಸುಟ್ಟ ಗುರುತುಗಳು, ಗೀರುಗಳು ಹಾಗೂ ಮುಖದ ಮೇಲೆ ಲಿಪ್‌ಸ್ಟಿಕ್ ಮತ್ತು ಮೇಕಪ್ ಗುರುತುಗಳಿದ್ದವು ಎಂದು ರಂಜನಾ ಶರ್ಮಾ ಆರೋಪಿಸಿದ್ದಾರೆ.
ಶಿವ ಮೃತಪಟ್ಟಾಗ ಒಳ ಉಡುಪು ಮಾತ್ರ ಧರಿಸಿದ್ದ. ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಬೀಳುವ ಮೊದಲು ಮಗನಿಗೆ ಚಿತ್ರಹಿಂಸೆ ನೀಡಲಾಗಿತ್ತು. ಇತ್ತ, ಶಿವ ಬಿದ್ದ ಸುಮಾರು 15 ನಿಮಿಷಗಳ ಬಳಿಕ ಬಿಳಿ ಆಡಿ ಕಾರು ಅಪಾರ್ಟ್‌ಮೆಂಟ್‌ಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






