ಐದು ಅಂತಸ್ತಿನ ಕಟ್ಟಡ ಕುಸಿತ: ಮೂವರು ಮೃತ್ಯು, 11ಕ್ಕೂ ಹೆಚ್ಚು ಮಂದಿ ಗಾಯ
ನವದೆಹಲಿ: ದೆಹಲಿಯ ಹೊಸ ಸೀಮಾಪುರಿಯ ಈದ್ಗಾ ಮೀನು ಮಾರುಕಟ್ಟೆಯ ಬಳಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದ್ದು, ಮೂವರು ಮೃತ ಪಟ್ಟು 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನಿನ್ನೆ ಮಧ್ಯಾಹ್ನ 3:15ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಮಾಹಿತಿ ಪಡೆದ ತಕ್ಷಣ ದೆಹಲಿ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಮಗು ಸೇರಿದಂತೆ ಮೂವರು ಪ್ರಾಣಕಳೆದುಕೊಂಡಿದ್ದಾರೆ. 12 ವರ್ಷದ ಬಾಲಕಿ, ಗರ್ಭಿಣಿ ಮಹಿಳೆ ಮತ್ತು ಇನ್ನೊಬ್ಬ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಸುಮಾರು 11 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವಶೇಷಗಳ ಅಡಿಯಲ್ಲಿ ಜನರು ಸಿಕ್ಕಿಹಾಕಿಕೊಂಡಿರುವ ವರದಿಗಳಿವೆ.
ಗಾಯಗೊಂಡವರನ್ನು ತಕ್ಷಣವೇ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರದ ದೃಶ್ಯಾವಳಿಗಳಿರುವ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವಶೇಷಗಳು ಕಾಣಿಸುತ್ತಿವೆ. ನೂರಾರು ಸ್ಥಳೀಯರು ಅವಶೇಷಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ದೆಹಲಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.






