ಕಾಸರಗೋಡು: ವಿದ್ಯಾರ್ಥಿ ಸಂಘಟನೆಗಳ ನಡುವೆ ಗಲಾಟೆ: ಮೂವರಿಗೆ ಗಾಯ
ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕೋತ್ಸವ ಪ್ರಯುಕ್ತ ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 2 ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕ್ತಾರರು ಭಾಗವಹಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಾಹಿತ್ಯ ಅಕಾಡೆಮಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಕೇರಳ ಕೇಂದ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಆರ್‌ಎಸ್‌ಎಸ್ ಬೌದ್ಧಿಕ ವಿಭಾಗವೆಂದು ಪರಿಗಣಿಸಲಾಗುವ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಮುಖ್ಯ ಭಾಷಣ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಯಬೇಕಿದ್ದ ಗ್ರಂಥಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದರು. ಇದರಿಂದ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು. ಎಸ್‌ಎಫ್‌ಐ ಕೇರಳ ಕೇಂದ್ರ ವಿಶ್ವವಿದ್ಯಾಲಯ ಘಟಕದ ಕಾರ್ಯದರ್ಶಿ ಸೈಯದ್ ಅಲಿ, ಪ್ಲಾಂಟ್ ಸೈನ್ಸ್ ವಿಭಾಗದ ಅಭಿರಾಗ್ ಮತ್ತು ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಭಾಗದ ಮುರಳೀಕೃಷ್ಣನ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮಧ್ಯಾಹ್ನ ಕಾರ್ಯಕ್ರಮದ ಸ್ಥಳದಿಂದ ಹೊರಬಂದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿ ಘೋಷಣೆಗಳನ್ನು ಕೂಗಿದರು.





