November 17, 2026
image_editor_output_image1413990232-1794920453614

ಕಾಸರಗೋಡು: ಜಿಲ್ಲೆಯ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರು ಗ್ರಾಮದ ಕಾಟಿಪಳ್ಳದಲ್ಲಿ ಯುವಕನೊಬ್ಬ ಗುಂಡೇಟಿಗೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಂಚಕಲ್ಲು ಕಾಟಿಪಳ್ಳ ಹೌಸ್‌ನ ಮೊಯ್ದು ಅವರ ಪುತ್ರ ಹೈದರ್ ಅಲಿ (27) ಮೃತಪಟ್ಟ ಯುವಕ.

ಕಾಟಿಪಳ್ಳದ ಬೋರ್‌ವೆಲ್ ಸಮೀಪದ ಮೈದಾನವೊಂದರಲ್ಲಿ ಹೈದರ್ ಅಲಿ ಸ್ಕೂಟರ್‌ನಿಂದ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಗಮನಿಸಿದ ಅವರ ಸ್ನೇಹಿತ ಮುಹಮ್ಮದ್ ರಮೀಸ್ ತಕ್ಷಣ ಕಾರಿನಲ್ಲಿ ಅವರನ್ನು ಚೆರ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಹೈದರ್ ಅಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಸ್ಕೂಟರ್ ಬಿದ್ದ ಸ್ಥಿತಿಯಲ್ಲಿದ್ದು, ಅದರ ಸಮೀಪದಲ್ಲೇ ಬಂದೂಕೊಂದು ಪತ್ತೆಯಾಗಿದೆ. ಹೈದರ್ ಅಲಿ ಅವರ ಕೆನ್ನೆಗೆ ಗುಂಡು ತಗುಲಿರುವುದು ಪ್ರಾಥಮಿಕವಾಗಿ ಕಂಡುಬಂದಿದೆ.

ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಯುವಕ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಘಟನಾ ಸ್ಥಳಕ್ಕೆ ಆದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಯುವಕನ ಸಾವಿನ ಹಿಂದಿನ ನೈಜ ಕಾರಣ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!