ಪುತ್ತೂರು: ಹಿಂ.ಜಾ.ವೇ. ಮುಖಂಡ ದಿನೇಶ್ ಪಂಜಿಗ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ
ಪುತ್ತೂರು: ದರ್ಬೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿ ಧಾರ್ಮಿಕ ವೈ ಮನಸ್ಸು ಉಂಟಾಗುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್‌ಗೆ ಕರೆ ಕೊಟ್ಟ ಆರೋಪ ಎದುರಿಸುತ್ತಿರುವ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ದಿನೇಶ್ ಪಂಜಿಗ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ದರ್ಬೆಯ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆ ಹೊಂದಿರುವ ವ್ಯಕ್ತಿ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮೂಲಕ ಧಾರ್ಮಿಕ ವೈ ಮನಸ್ಸು ಉಂಟಾಗುವ ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶ ಪ್ರಸಾರ ಮಾಡುವ ಮೂಲಕ ಬಂದ್‌ಗೆ ಕರೆ ಕೊಟ್ಟು ಜನರು ಅಕ್ರಮ ಕೂಟ ಸೇರಿ ಕಾನೂನು ಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿದ ಆರೋಪದಲ್ಲಿ ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆ ಹೊಂದಿರುವ ದಿನೇಶ್ ಪಂಜಿಗ ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2026ರಂತೆ ಬಿಎನ್‌ಎಸ್ ಕಲಂ 353(2),57 ಮತ್ತು 189ರಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ದಿನೇಶ್ ಪಂಜಿಗ ಅವರು ನಿರೀಕ್ಷಣಾ ಜಾಮೀನು ಕೋರಿ ತಮ್ಮ ಪರ ವಕೀಲ ಮಹೇಶ್ ಕಜೆ ಅವರ ಮೂಲಕ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಸೆ.3ರಂದು ಆದೇಶ ನೀಡಿದ್ದರು. ಈ ಮಧ್ಯೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ದಿನೇಶ್ ಪಂಜಿಗ ಅವರು ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮುಂದಿನ ಆದೇಶದ ತನಕ ದಿನೇಶ್ ಪಂಜಿಗ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ನೀಡಿದ್ದರು.
ಸೆ.೨ರಂದು ನಡೆದ ವಿಚಾರಣೆಯಲ್ಲಿ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಲಾಗಿತ್ತು. ಇದೀಗ ದಿನೇಶ್ ಪಂಜಿಗ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದ ತನಿಖೆಗೆ ಹೈಕೋರ್ಟ್ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.
ದಿನೇಶ್ ಪಂಜಿಗ ಅವರ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲ ಅರುಣ್‌ಶ್ಯಾಂ ಪುತ್ತೂರು ವಾದಿಸಿದ್ದರು.




