ಪೆಟ್ರೋಲ್ ಪಂಪ್‌ನಲ್ಲಿ ಸಿಎನ್‌ಜಿ ಕಾರು ಸ್ಫೋಟ: ಸ್ಫೋಟದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ
ಗುಜರಾತ್: ರಾಷ್ಟ್ರೀಯ ಹೆದ್ದಾರಿ 48ರ ಜಿಂದಾಲ್ ಕಂಪನಿ ಬಳಿಯ ಪೆಟ್ರೋಲ್–ಸಿಎನ್‌ಜಿ ಪಂಪ್‌ನಲ್ಲಿ ಶನಿವಾರ ಕಾರಿಗೆ ಸಿಎನ್‌ಜಿ ಇಂಧನ ತುಂಬಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗ್ಯಾಸ್ ಟ್ಯಾಂಕ್ ಪ್ರಬಲವಾಗಿ ಸ್ಫೋಟಗೊಂಡ ಭೀಕರ ಘಟನೆ ಸಂಭವಿಸಿದೆ.
ಚಾಲಕನೊಬ್ಬ ತನ್ನ ಕಾರಿಗೆ ಸಿಎನ್‌ಜಿ ತುಂಬಿಸಲು ಜಿಂದಾಲ್ ಕಂಪನಿ ಸಮೀಪದ ಪಂಪ್‌ನಲ್ಲಿ ನಿಲ್ಲಿಸಿದ್ದ. ಸಿಎನ್‌ಜಿ ಪಂಪ್‌ನ ಉದ್ಯೋಗಿ ಕಾರಿನ ಗ್ಯಾಸ್ ಟ್ಯಾಂಕ್‌ಗೆ ನಳಿಕೆ ಜೋಡಿಸಿ ಇಂಧನ ತುಂಬಿಸಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ, ತಾಂತ್ರಿಕ ದೋಷ ಅಥವಾ ಅತಿಯಾದ ಒತ್ತಡದ ಕಾರಣದಿಂದ ಕಾರಿನಲ್ಲಿದ್ದ ಸಿಎನ್‌ಜಿ ಟ್ಯಾಂಕ್ ಪ್ರಬಲ ಶಬ್ದದೊಂದಿಗೆ ಸಿಡಿದಿದೆ.
ಸ್ಫೋಟದ ತೀವ್ರತೆ ಎಷ್ಟು ಭೀಕರವಾಗಿತ್ತು ಎಂದರೆ , ಕಾರಿನ ಭಾಗಗಳು ಹಾಗೂ ಗಾಜಿನ ಚೂರುಗಳು ನೂರಾರು ಅಡಿ ದೂರಕ್ಕೆ ಹಾರಿಬಿದ್ದಿವೆ. ಸ್ಫೋಟದ ರಭಸಕ್ಕೆ ಕಾರಿನ ಹಿಂಭಾಗವು ಪಟಾಕಿ ಸಿಡಿದಂತೆ ಕಾಗದದ ತುಂಡುಗಳಾಗಿ ಹರಿದುಹೋಗಿದೆ. ಘಟನೆಯ ರಭಸಕ್ಕೆ ಪಂಪ್‌ನಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಭಯಭೀತರಾಗಿ ಓಡಿ ಹೋಗಿದ್ದಾರೆ. ಅಲ್ಲದೆ, ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಇತರ ಎರಡು ವಾಹನಗಳಿಗೂ ಹಾನಿಯಾಗಿದೆ.
ಸಿಎನ್‌ಜಿ ಇಂಧನ ತುಂಬಿಸುವಾಗ ವಾಹನದಲ್ಲಿದ್ದ ಪ್ರಯಾಣಿಕರು ಹೊರಗೆ ಇರಬೇಕು ಎಂಬ ಕಡ್ಡಾಯ ಸುರಕ್ಷತಾ ನಿಯಮವನ್ನು ಪಾಲಿಸಲಾಗಿತ್ತು. ಇಂಧನ ತುಂಬಿಸುವಾಗ ಕಾರಿನೊಳಗೆ ಯಾರೂ ಇಲ್ಲದ ಕಾರಣ, ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳು ಸಂಭವಿಸಿಲ್ಲ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಕರ್ಜನ್ ಅಗ್ನಿಶಾಮಕ ದಳದ ಸಿಬ್ಬಂದಿ, ರಾಸಾಯನಿಕ ಕಿಡಿಗಳು ಅಥವಾ ಬೆಂಕಿ ಆವರಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸಿಎನ್‌ಜಿ ಪಂಪ್‌ನ ಸುರಕ್ಷತಾ ವ್ಯವಸ್ಥೆ ಹಾಗೂ ಸ್ಫೋಟಕ್ಕೆ ನಿಖರ ಕಾರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ಈ ಸಂಪೂರ್ಣ ಸ್ಫೋಟದ ದೃಶ್ಯಾವಳಿಗಳು ಪಂಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿವೆ.





