November 25, 2026

ದುಬೈ ರಾಸ್ ಅಲ್ ಖೈಮಾದಲ್ಲಿ ಭೀಕರ ರಸ್ತೆ ಅಪಘಾತ: 13 ಮಂದಿ ಮೃತ್ಯು, 14 ಜನರಿಗೆ ಗಂಭೀರ ಗಾಯ

0
image_editor_output_image518058434-1795586774767

ದುಬೈ: ಯುಎಇಯ ರಾಸ್ ಅಲ್ ಖೈಮಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಬಸ್ಸೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಎಮಿರೇಟ್‌ನ ದಕ್ಷಿಣ ಪ್ರದೇಶದ ‘ಅಲ್ ವತನ್’ (Al Watan) ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರು ಹಾಗೂ ಗಾಯಾಳುಗಳ ಗುರುತು ಮತ್ತು ರಾಷ್ಟ್ರೀಯತೆ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 41 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮಂಗಳವಾರ ಮುಂಜಾನೆ ಅಲ್ ವತನ್ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಯಾಂತ್ರಿಕ ದೋಷದಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನ ಹಿಂಭಾಗಕ್ಕೆ ಬಸ್ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ 11 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ರಾಸ್ ಅಲ್ ಖೈಮಾ ಪೊಲೀಸರನ್ನು ಉಲ್ಲೇಖಿಸಿ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಅಪಘಾತಕ್ಕೀಡಾದ ಬಸ್ ಮಲಯಾಳಿ ಒಡೆತನದ ಟ್ರಾವೆಲ್ ಏಜೆನ್ಸಿಗೆ ಸೇರಿತ್ತು. ವೀಸಾ ಬದಲಾವಣೆಯ ನಂತರ ಪ್ರಯಾಣಿಕರು ಒಮಾನ್‌ನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಪ್ರಯಾಣಿಕರ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಅಲ್ ಮುನೈ ಸಮಗ್ರ ಪೊಲೀಸ್ ಠಾಣೆ, ರಾಸ್ ಅಲ್ ಖೈಮಾ ಪೊಲೀಸರ ಶೋಧ ಮತ್ತು ರಕ್ಷಣಾ ಇಲಾಖೆಯ ತುರ್ತು ತಂಡಗಳು, ಹಟ್ಟಾ ಪೊಲೀಸ್ ಗಸ್ತು ಪಡೆ, ದುಬೈ ಮತ್ತು ಕದ್ರಾದ ಆಂಬ್ಯುಲೆನ್ಸ್ ಹಾಗೂ ನಾಗರಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಮೃತದೇಹಗಳನ್ನು ಶವಾಗಾರಕ್ಕೆ ಸಾಗಿಸಲಾಗಿದ್ದು, ಗಾಯಗೊಂಡಿರುವ 14 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಹಾಗೂ ಗಾಯಾಳುಗಳ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!