October 24, 2026

ಸೌದಿ ಅರೇಬಿಯದಲ್ಲಿ ಸಿಲುಕಿರುವ 600ಕ್ಕೂ ಹೆಚ್ಚು ಕನ್ನಡಿಗ ಉಮ್ರಾ ಯಾತ್ರಾರ್ಥಿಗಳ ರಕ್ಷಣೆಗೆ ಸರ್ಕಾರದ ತುರ್ತು ಕ್ರಮ

0
image_editor_output_image-1953863970-1792813278202

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು, ಮಕ್ಕಾ ಮತ್ತು ಮದೀನಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳ ರಕ್ಷಣೆ ಹಾಗೂ ನೆರವಿಗೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಿದೆ. ಆಕಾಶ ಏರ್, ಇಂಡಿಗೋ, ಫ್ಲೈನಾಸ್ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಜೆದ್ದಾ ಮತ್ತು ರಿಯಾದ್‌ನಿಂದ ಬೆಂಗಳೂರು ಸೇರಿದಂತೆ ಭಾರತಕ್ಕೆ ಬರುವ ವಿಮಾನ ಸಂಚಾರವನ್ನು ನಿಲ್ಲಿಸಿರುವುದರಿಂದ ಯಾತ್ರಾರ್ಥಿಗಳು ಪರದಾಡುವಂತಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಜ್ ಕಮಿಟಿಯ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನೇರವಾಗಿ ಮಕ್ಕಾ ಮತ್ತು ಮದೀನಾಕ್ಕೆ ಕಳುಹಿಸಿಕೊಟ್ಟಿದೆ. ಸ್ಥಳಕ್ಕೆ ತೆರಳಿದ ತಂಡವು ಅಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದೆ.

ಅಲ್ಲದೆ, ಮಕ್ಕಾ ಮತ್ತು ಮದೀನಾದಲ್ಲಿರುವ ಭಾರತೀಯ ಸಮುದಾಯದ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಅವರ ಸಹಕಾರದೊಂದಿಗೆ ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳಿಗೆ ಉಚಿತ ಊಟ, ಅಗತ್ಯ ಔಷಧಿ ಹಾಗೂ ವಾಸಿಸಲು ಸುರಕ್ಷಿತ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ರಯಾಣಿಕರನ್ನು ವಿದೇಶಕ್ಕೆ ಕರೆದೊಯ್ದ ಮೇಲೆ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಸಂಪೂರ್ಣ ಜವಾಬ್ದಾರಿ ಏರ್‌ಲೈನ್ಸ್‌ಗಳ ಮೇಲಿದೆ. ಈ ಕುರಿತು ಜವಾಬ್ದಾರಿ ಮರೆತಿರುವ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಪತ್ರ ಬರೆಯಲಾಗಿದೆ.

ಜೊತೆಗೆ, ಯಾತ್ರಾರ್ಥಿಗಳನ್ನು ವಿಶೇಷ ವಿಮಾನಗಳ ಮೂಲಕ ಸುರಕ್ಷಿತವಾಗಿ ವಾಪಸ್ ಕರೆತರಲು ಅನುಕೂಲ ಕಲ್ಪಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಕರ್ತವ್ಯ ಮರೆತ ಏರ್‌ಲೈನ್ಸ್‌ಗಳ ವಿರುದ್ಧ ಹಜ್ ಕಮಿಟಿ ವತಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವ ಕುರಿತು ಕಾನೂನು ತಜ್ಞರೊಂದಿಗೆ ಗಂಭೀರ ಚರ್ಚೆ ನಡೆಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!