October 3, 2026

ಕಡಬ: ಕಾರಿಗೆ ಕಡವೆ ಡಿಕ್ಕಿಯಾಗಿ ಸಾವು, ಕಾರು ಜಖಂ

0
image_editor_output_image518046101-1791035052069

ಕಡಬ: ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಕಡವೆಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ಸಂಜೆ ಹೆದ್ದಾರಿಯಲ್ಲಿ ವಾಹನ ಸಂಚಾರವಿದ್ದ ವೇಳೆ ಪಕ್ಕದ ಅರಣ್ಯ ಪ್ರದೇಶದಿಂದ ಕಡವೆಯೊಂದು ಏಕಾಏಕಿ ರಸ್ತೆಗೆ ನುಗ್ಗಿದೆ. ಈ ಸಂದರ್ಭದಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಕಾರಿಗೆ ಕಡವೆ ಬಲವಾಗಿ ಅಪ್ಪಳಿಸಿದೆ. ಡಿಕ್ಕಿಯ ತೀವ್ರತೆಗೆ ರಸ್ತೆ ಬದಿಗೆ ಎಸೆಯಲ್ಪಟ್ಟ ಕಡವೆ, ಗಂಭೀರ ಗಾಯಗೊಂಡು ಕೆಲಕಾಲ ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದೆ.

ಅಪಘಾತದ ಪರಿಣಾಮ ಕಾರಿನ ಬಾನೆಟ್ ಹಾಗೂ ಮುಂಭಾಗದ ಬಿಡಿಭಾಗಗಳು ತೀವ್ರವಾಗಿ ಹಾನಿಗೊಳಗಾಗಿವೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯಂಚಿನಲ್ಲಿದ್ದ ಕಡವೆಯ ಕಳೇಬರವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದೆ.

 

Leave a Reply

Your email address will not be published. Required fields are marked *

error: Content is protected !!