ಕಣ್ಣೂರು: ಬೆಂಗಳೂರಿ
ಕಣ್ಣೂರು ಜುಲೈ 11: ಬೆಂಗಳೂರಿನಿಂದ ಕಣ್ಣೂರಿನಲ್ಲಿ ನಡೆಯಬೇಕಿದ್ದ ಸೋದರಸಂಬಂಧಿ ಸಹೋದರಿಯ ಮದುವೆಗೆಂದು ಕಾರಿನಲ್ಲಿ ಹೊರಟಿದ್ದ ಐದು ಮಂದಿ ಆಪ್ತ ಇಂಜಿನಿಯರಿಂಗ್ ಸ್ನೇಹಿತರ ಪೈಕಿ ನಾಲ್ವರು ಯುವಕರು ಮನೆಗೆ ತಲುಪಲು ಕೇವಲ 20 ಕಿಲೋಮೀಟರ್ ಇರುವಾಗಲೇ ರಸ್ತೆ ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದ್ದಾರೆ.
ಕಣ್ಣೂರಿನ ಅಲವಿಲ್ ನಿವಾಸಿ ಶಾನ್ ಸಿರಾಜ್ (21), ಕಾಂಞಂಗಾಡ್‌ನ ಮೊಹಮ್ಮದ್ ರಿಜ್ವಾನ್ (21), ನವದೆಹಲಿಯ ಪರಮ ಛೆಟ್ರಿ (21) ಹಾಗೂ ಹೈದರಾಬಾದ್‌ನ ಹರ್ಷ್ ಸಥೂರಿ (21) ಮೃತಪಟ್ಟ ದುರ್ದೈವಿ ಇಂಜಿನಿಯರ್‌ಗಳು. ಇವರೊಂದಿಗೆ ಪ್ರಯಾಣಿಸುತ್ತಿದ್ದ ತ್ರಿಶೂರ್ ಮೂಲದ ಮತ್ತೊಬ್ಬ ಸ್ನೇಹಿತ ಆದಿತ್ಯ ಕೃಷ್ಣನ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮೃತಪಟ್ಟ ಐದೂ ಮಂದಿ ಯುವಕರು ಬೆಂಗಳೂರಿನ ಯಲಹಂಕದಲ್ಲಿರುವ ‘ವಿಎಸ್ಎಂ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ’ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಕೇವಲ ಎರಡು ತಿಂಗಳ ಹಿಂದಷ್ಟೇ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿ, ಭವಿಷ್ಯದ ಕನಸು ಕಾಣುತ್ತಿದ್ದರು. ಶಾನ್ ಸಿರಾಜ್ ಇತ್ತೀಚೆಗಷ್ಟೇ ಬೆಂಗಳೂರಿನ ಇಂಜಿನಿಯರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರೆ, ಉಳಿದ ಸ್ನೇಹಿತರು ಕೆಲಸ ಹುಡುಕಾಟದಲ್ಲಿದ್ದರು.





