September 2, 2026

ಬಂಟ್ವಾಳ: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿ: ಲಾರಿಯಡಿ ಸಿಲುಕಿ ಓರ್ವ ಕಾರ್ಮಿಕ ಮೃತ್ಯು-ಇಬ್ಬರು ಗಂಭೀರ

0
image_editor_output_image-1070302584-1784107580259

ಬಂಟ್ವಾಳ: ಇಲ್ಲಿನ ಸಮೀಪದ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಬಳಿಯ ಅತ್ತಳಿಕೆ ಎಂಬಲ್ಲಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಂಪೂರ್ಣವಾಗಿ ರಸ್ತೆಗೆ ಮಗುಚಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಲಾರಿಯಡಿ ಸಿಲುಕಿದ್ದ ಓರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಾವಳಪಡೂರು ನಿವಾಸಿ ಪ್ರಮೋದ್ (42) ಮೃತಪಟ್ಟ ದುರ್ದೈವಿ ಕಾರ್ಮಿಕ. ಲಾರಿ ಚಾಲಕ ಸುನಿಲ್ ಹಾಗೂ ಮತ್ತೋರ್ವ ಕಾರ್ಮಿಕ ವಿಜಯ್ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ:
ಕಲ್ಲಿನ ಕೋರೆಯಿಂದ ಕೆಂಪುಕಲ್ಲುಗಳನ್ನು (ರೆಡ್ ಸ್ಟೋನ್) ಲೋಡ್ ಮಾಡಿಕೊಂಡು ಬರುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಸಂಪೂರ್ಣವಾಗಿ ತಲೆಕೆಳಗಾಗಿ ಬಿದ್ದಿದೆ. ಲಾರಿಯಲ್ಲಿದ್ದ ನೂರಾರು ಕೆಂಪುಕಲ್ಲುಗಳು ರಸ್ತೆಯುದ್ದಕ್ಕೂ ಬಿದ್ದಿದ್ದು, ಲಾರಿಯ ನೋಂದಣಿ ಸಂಖ್ಯೆ KA-19-AD-6066 ಆಗಿದೆ. ಬ್ರೇಕ್ ವೈಫಲ್ಯ ಸಂಭವಿಸಿದ್ದೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ

ಲಾರಿ ಸಂಪೂರ್ಣ ಮಗುಚಿ ಬಿದ್ದಿದ್ದರಿಂದ ಕಾರ್ಮಿಕರಾದ ಪ್ರಮೋದ್ ಮತ್ತು ವಿಜಯ್ ಅವರು ಲಾರಿಯ ಕ್ಯಾಬಿನ್ ಹಾಗೂ ಕಲ್ಲುಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿ, ಲಾರಿಯನ್ನು ಎತ್ತಿ ಅವಶೇಷಗಳ ಅಡಿಯಲ್ಲಿದ್ದ ಇಬ್ಬರನ್ನು ಹೊರತೆಗೆಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಪ್ರಮೋದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಆದರ್ಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!