ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸ್ತೀವಿ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
ಮೈಸೂರು: ಮೈಸೂರಿನ ಕಡೆಯ ‘ಪೇಟೆ ರೌಡಿ’ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸೂಕ್ಷ್ಮ ಸಂದರ್ಭಗಳನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಗೃಹ ಇಲಾಖೆಯು ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯಲು ಬಿಡುವುದಿಲ್ಲ ಎಂದಿದ್ದಾರೆ.
‘ಅಸ್ತಿತ್ವ ಕಳೆದುಕೊಂಡು ಕತ್ತಲೆ ಜಗತ್ತಿನ ಅತೃಪ್ತ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನು ಕರೆಸಿಕೊಂಡು ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಪೊಲೀಸ್ ಠಾಣೆಗೆ ನುಗ್ಗುತ್ತೇನ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಪೊಲೀಸ್ ಠಾಣೆಗೆ ನುಗ್ಗಿದ ನಂತರ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದುʼ ಎಂದು ಮಾಜಿ ಸಂಸದ ಪ್ರತಾಪ್ ಸಿಂಹರ ಹೆಸರು ಉಲ್ಲೇಖಿಸದೆ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.





