ವಿಮಾನ ನಿಲ್ದಾಣದಲ್ಲಿ Amazon ಕಾರ್ಗೋ ವಿಮಾನ ಅಪಘಾತ: ಐವರು ಮೃತ್ಯು, ಮೂವರು ಗಂಭೀರ
ಮಿಯಾಮಿ: Amazon Prime Airಗೆ ಸೇರಿದ ಕಾರ್ಗೋ ವಿಮಾನವೊಂದು ಭಾನುವಾರ ಅಮೆರಿಕದ ಫ್ಲೋರಿಡಾದ ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು. ವಿಮಾನ ಇಳಿಯುವಾಗ ರನ್ ವೇ ದಾಟಿ, ನೆಲದಲ್ಲಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
‘Prime Air Flight 7598’ ವಿಮಾನವು ಪ್ಯುರ್ಟೊ ರಿಕೊದ ಸ್ಯಾನ್ ಜುವಾನ್ ನಿಂದ ಮಿಯಾಮಿಗೆ ಬರುತ್ತಿತ್ತು. ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಸ್ವಲ್ಪ ಮುನ್ನ ವಿಮಾನ ನಿಲ್ದಾಣದ ರನ್‌ವೇ ದಾಟಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿಮಾನ ಡಿಕ್ಕಿ ಹೊಡೆದ ವಾಹನಗಳಲ್ಲಿ ಕನಿಷ್ಠ ಇಬ್ಬರು ಸಿಲುಕಿಕೊಂಡಿದ್ದರು. ವಿಮಾನದೊಳಗೆ ಪೈಲಟ್ ಮತ್ತು ಸಹ ಪೈಲಟ್ ಕೂಡ ಸಿಲುಕಿಕೊಂಡಿದ್ದರು ಎಂದು ಮಿಯಾಮಿ-ಡೇಡ್ ಅಗ್ನಿಶಾಮಕ ಮುಖ್ಯಸ್ಥ ರೇ ಜಡಲ್ಲಾ ತಿಳಿಸಿದ್ದಾರೆ.
ಅಪಘಾತದ ಬಳಿಕ ವಿಮಾನದಿಂದ ಇಂಧನ ಸೋರಿಕೆಯಾಗುತ್ತಿತ್ತು. ತುರ್ತು ಸಿಬ್ಬಂದಿ ಸೋರಿಕೆಯನ್ನು ನಿಯಂತ್ರಿಸುವ ಕಾರ್ಯ ನಡೆಸಿದರು. ಘಟನಾ ಸ್ಥಳಕ್ಕೆ 60ಕ್ಕೂ ಹೆಚ್ಚು ಅಗ್ನಿಶಾಮಕ ಘಟಕಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿ ಧಾವಿಸಿದ್ದರು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಜ್ವಾಲೆ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರ ಜತೆಗೆ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ನಡೆಸಿದರು.
ಈ ದುರಂತಕ್ಕೆ ಅಮೆಜಾನ್ ಸಂಸ್ಥೆಯು ತೀವ್ರ ಕಂಬನಿ ಮಿಡಿದಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಮೆಜಾನ್ ವಕ್ತಾರ ಕೆಲ್ಲಿ ನಾಂಟೆಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಮತ್ತು ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ (ಎನ್‌ಟಿಎಸ್‌ಬಿ) ತನಿಖೆ ಆರಂಭಿಸಿವೆ.





