ಕೇರಳ ಮೂಲದ ಮೂವರು ಸಜೀವ ದಹನ: ರೊಮೇನಿಯಾ ಪ್ರಜೆ ಬಂಧನ
ಬರ್ಲಿನ್: ಜರ್ಮನಿಯ ಬೋಖುಮ್ ನಗರದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೇರಳ ಮೂಲದ ಮೂವರು ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಕಟ್ಟಡಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯಲ್ಲಿ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಕೇರಳದ ಇಡುಕ್ಕಿ ಜಿಲ್ಲೆಯ ಇರಟ್ಟಯಾರ್ನ ನೋವಾ ಸಾಬು (25), ಕೊಲ್ಲಂ ಜಿಲ್ಲೆಯ ಪೆರಿನಾಡ್ನ ಅಂಜಲಿ ಎಸ್. ಜಾಯ್ (27) ಮತ್ತು ಎರ್ನಾಕುಲಂ ಜಿಲ್ಲೆಯ ಕಾಲಡಿಯ ಸಿವಿನ್ ಜೋನಿ (27) ಎಂದು ಗುರುತಿಸಲಾಗಿದೆ.ನೋವಾ ಉದ್ಯೋಗಕ್ಕಾಗಿ ಜರ್ಮನಿಗೆ ತೆರಳಿದ್ದರು. ಅಂಜಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಉದ್ದೇಶದಿಂದ ಜರ್ಮನಿಗೆ ಹೋಗಿದ್ದರು. ಸಿವಿನ್ ಕೂಡ ಕೇವಲ ಎರಡು ವಾರಗಳ ಹಿಂದಷ್ಟೇ ಜರ್ಮನಿಗೆ ತೆರಳಿದ್ದರು ಎಂದು ವರದಿಯಾಗಿದೆ. ಮೂವರ ಸಾವಿನ ಸುದ್ದಿ ಕೇರಳದ ಕುಟುಂಬಗಳಲ್ಲಿ ಶೋಕವನ್ನುಂಟುಮಾಡಿದೆ.
ಜರ್ಮನಿಯ ಬೋಖುಮ್ ನಗರದ ಹೋಫ್ಸ್ಟೆಡೆ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಮಂಗಳವಾರ ಮುಂಜಾನೆ ಸ್ಥಳೀಯ ಕಾಲಮಾನ ಸುಮಾರು 4.15ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.
ಕಟ್ಟಡದ ಮೆಟ್ಟಿಲುಗಳ ಮೂಲಕ ಬೆಂಕಿ ಮತ್ತು ದಟ್ಟ ಹೊಗೆ ಮೇಲಿನ ಮಹಡಿಗಳಿಗೆ ಹರಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ನಿವಾಸಿಗಳನ್ನು ತಲುಪಲು ತೊಂದರೆಯಾಯಿತು.
ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರ ಮೃತದೇಹಗಳು ಎರಡನೇ ಮಹಡಿಯಲ್ಲಿದ್ದ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿವೆ. ಹೊಗೆ ಸೇವನೆಯಿಂದ ಅಸ್ವಸ್ಥಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ರಾಷ್ಟ್ರೀಯತೆ ಮತ್ತು ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.






