ಒತ್ತಾಯಪೂರ್ವಕ ಯುವಕನ ಗುಪ್ತಾಂಗದ ಶಸ್ತ್ರಚಿಕಿತ್ಸೆ: ಇಬ್ಬರು ಮಂಗಳಮುಖಿಯರ ಬಂಧನ
ಚಿತ್ರದುರ್ಗ: ಇಚ್ಛೆಗೆ ವಿರುದ್ಧವಾಗಿ ಯುವಕನೋರ್ವನ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪದ ಮೇಲೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಇಬ್ಬರು ಮಂಗಳಮುಖಿಯರನ್ನ ಬಂಧಿಸಿದ್ದಾರೆ.
ಚಿತ್ರದುರ್ಗದ ಬುದ್ಧನಗರದ ನಿವಾಸಿಗಳಾದ ಅನುಷ್ಕಾ ಹಾಗೂ ನಳಿನಾ ಬಂಧಿತ ಆರೋಪಿಗಳಾಗಿದ್ದು ಚಳ್ಳಕೆರೆ ಗೇಟ್ ಬಳಿ ಸುತ್ತಾಡುತ್ತಿದ್ದ ವೇಳೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದುರ್ಗದಲ್ಲಿ ಹೂವು ವ್ಯಾಪಾರ ಮಾಡುತ್ತಿದ್ದ 25 ವರ್ಷದ ಯುವಕನಿಗೆ ಹೂವು ನೀಡುವ ಸಂದರ್ಭ ಇಬ್ಬರು ಮಂಗಳಮುಖಿಯರ ಪರಿಚಯವಾಗಿತ್ತು ಎನ್ನಲಾಗಿದೆ.
ಬಳಿಕ ಯುವಕನ ಸಲಿಗೆಯನ್ನ ದುರುಪಯೋಗ ಪಡಿಸಿಕೊಂಡಿರುವ ಮಂಗಳಮುಖಿಯರು ಆತನಿಗೆ ಸೆಪ್ಟೆಂಬರ್ 1 ರಂದು ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಯುವಕನ ತೊಡೆಗಳ ಮೇಲೆ ಬಿಸಿನೀರು ಹಾಗೂ ಕೆಂಡದಿಂದ ಸುಟ್ಟು ಹಿಂಸೆ ನೀಡಿದ ಆರೋಪವೂ ಕೇಳಿಬಂದಿದೆ.
ಸದ್ಯ ಯುವಕ ತನ್ನ ಸ್ವಗ್ರಾಮದಲ್ಲಿ ನೆಲೆಸಿದ್ದಾನೆ. ಈ ಸಂಬಂಧ ಯುವಕನ ತಂದೆ ಪರಶುರಾಂಪುರ ಪೊಲೀಸ್ ಠಾಣೆಗೆ ಅಕ್ಟೋಬರ್ 9 ರಂದು ದೂರು ನೀಡಿದ್ದರು. ಬಳಿಕ ಈ ಪ್ರಕರಣ ಚಿತ್ರದುರ್ಗ ನಗರಠಾಣೆಗೆ ವರ್ಗಾವಣೆಯಾಗಿದೆ. ಹೀಗಾಗಿ ಪ್ರಕರಣದ ತನಿಖೆ ಮುಂದುವರಿಸಿರುವ ಚಿತ್ರದುರ್ಗ ನಗರ ಠಾಣೆ ಪೊಲೀಸರು, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.






