ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತ್ಯು
ಚೆನ್ನೈ: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಸದ್ಯ ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಪಟಾಕಿ ಘಟಕದಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ, ಆದರೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳಿಗೆ ಅಪಘಾತವು 9 ಗಂಟೆಯ ನಂತರ ಬೆಳಕಿಗೆ ಬಂದಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಡಿಎಫ್‌ಒ) ಕೆ.ಗಣೇಶನ್ ನೇತೃತ್ವದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಮೃತಪಟ್ಟವರನ್ನು ಎಸ್. ಕುಮಾರ್(38), ಪೆರಿಸಾಮಿ(65), ಬಿ. ಎಸ್. ವೀರಕುಮಾರ್ (40), ಮತ್ತು ಎಸ್. ಮುರುಗೇಶನ್(35) ಎಂದು ಗುರುತಿಸಲಾಗಿದೆ.
ಪಟಾಕಿ ಸ್ಪೋಟ ದುರಂತದಲ್ಲಿ ನಾಲ್ವರೂ ಕೂಡ ಸಜೀವ ದಹನಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




