ಮಂಗಳೂರು: ರೈಲ್ವೆ ಹಳಿಯಲ್ಲಿ ಭೂಕುಸಿತ: ಮಂಗಳೂರು-ಬೆಂಗಳೂರು ನಡುವಿನ ಸಂಚಾರ ರದ್ದು
ಮಂಗಳೂರು/ಹುಬ್ಬಳ್ಳಿ: ನಿರಂತರ ಧಾರಾಕಾರ ಮಳೆಯಿಂದ ಮೈಸೂರು ವಿಭಾಗದ ಎಡಕುಮೇರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ನಡುವಿನ ಎರಡು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಆಗಸ್ಟ್ 2ರಂದು ರದ್ದುಗೊಳಿಸಲಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಿಸಿರುವ ಬುಲೆಟಿನ್ ಪ್ರಕಾರ, ಆಗಸ್ಟ್ 1ರಂದು ರಾತ್ರಿ ಸುಮಾರು 8.45ಕ್ಕೆ ಎಡಕುಮೇರಿ–ಶ್ರೀವಾಗಿಲು ನಡುವಿನ ರೈಲು ಹಳಿಯ ಮೇಲೆ ಭೂಕುಸಿತ ಉಂಟಾಗಿದೆ. ನಿರಂತರ ಮಳೆಯಿಂದ ಪುನಃ ಪುನಃ ಭೂಕುಸಿತ ಸಂಭವಿಸುತ್ತಿರುವುದರಿಂದ ಹಳಿ ಮರುಸ್ಥಾಪನೆ ಕಾರ್ಯ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ 16575 ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ಗಳ ಆಗಸ್ಟ್ 2ರ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹಳಿ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೈಲು ಸಂಚಾರವನ್ನು ಆದಷ್ಟು ಬೇಗ ಪುನರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




