August 2, 2026

ಬಂಟ್ವಾಳ: ನೇತ್ರಾವತಿ ನದಿಯ ನೀರಿನ ಮಟ್ಟ ಇಳಿಕೆ: ಸಹಜ ಸ್ಥಿತಿಯತ್ತ ಮರಳಿದ ಬಂಟ್ವಾಳ

0
image_editor_output_image-1634450470-1785643539878

ಬಂಟ್ವಾಳ : ಆಗಸ್ಟ್ 1ರಂದು ಸಂಜೆ ಸುರಿದ ಭಾರೀ ಮಳೆಯ ಪರಿಣಾಮ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಪಾಣೆಮಂಗಳೂರು, ಬಂಟ್ವಾಳ ಸೇರಿದಂತೆ ಹಲವೆಡೆ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಭಾನುವಾರ (ಆಗಸ್ಟ್ 2) ಬೆಳಗಿನ ಜಾವದಿಂದ ನದಿಯ ನೀರಿನ ಮಟ್ಟ ಇಳಿಕೆಯಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಭಾನುವಾರ ಬೆಳಿಗ್ಗೆ ಸುಮಾರು 7.4 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಪ್ರವಾಹದ ತೀವ್ರತೆ ಗಣನೀಯವಾಗಿ ಕಡಿಮೆಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪಾಣೆಮಂಗಳೂರು ಆಲಡ್ಕ ಪ್ರದೇಶದ 15 ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿತ್ತು.

ಶನಿವಾರ ರಾತ್ರಿ ಜಕ್ರಿಬೆಟ್ಟು ಸೇರಿದಂತೆ ಹಲವೆಡೆ ನದಿ ನೀರು ರಸ್ತೆಗೆ ಹರಿದು ಬಂದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಡ್ಡಕಟ್ಟೆ ಬಸ್ ನಿಲ್ದಾಣಕ್ಕೂ ನೀರು ನುಗ್ಗಿದ ಕಾರಣ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದೇ ವೇಳೆ ಬಂಟ್ವಾಳದ ವೆಂಕಟರಮಣ ದೇವಸ್ಥಾನದ ಸಮೀಪದ ಮೆಟ್ಟಿಲುಗಳವರೆಗೂ ನೀರಿನ ಮಟ್ಟ ಏರಿಕೆಯಾಗಿತ್ತು.

ಭಾನುವಾರ ಬೆಳಗಿನ ವೇಳೆಗೆ ನೀರಿನ ಮಟ್ಟ ಇಳಿದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿದ್ದ ನೀರು ಸಂಪೂರ್ಣವಾಗಿ ಇಳಿದಿದ್ದು, ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಘಟ್ಟ ಪ್ರದೇಶದಲ್ಲಿ ಮುಂದುವರಿದಿರುವ ಮಳೆಯ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮತ್ತೆ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದ್ದು, ಸ್ಥಳೀಯರು ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!