ಮಂಗಳೂರಿನಲ್ಲಿ ಸೆ. 18ರಂದು ರಾಜ್ಯ ಸಚಿವ ಸಂಪುಟ ಸಭೆ
ಮಂಗಳೂರು: ಮಂಗಳೂರಿನಲ್ಲಿ ಸೆ. 18ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ ಎಂಬ ವಿಶ್ವಾಸ ಇದೆ. ವಾಟರ್ ಟೂರಿಸಂ ಬಗ್ಗೆ ರೋಡ್ ಮ್ಯಾಪ್ ಮಾಡಲು ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಸಚಿವ ಖಾದರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕರಾವಳಿ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ರೂಪುರೇಷೆ ಕೈಗೊಳ್ಳುವ ಸಂಭವ ಇದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡಂತೆ ಸಲಹೆ ಸೂಚನೆ ಪಡೆಯಲಾಗುವುದು ಎಂದರು.
ಕರ್ನಾಟಕದಲ್ಲಿ ಎರಡನೇ ರಾಜ್ಯ ಭಾಷೆಯಾಗಿ ತುಳುವಿಗೆ ಸ್ಥಾನಮಾನ ನೀಡುವ ವಿಚಾರ ಸರಕಾರದಿಂದ ತೀರ್ಮಾನವಾಗಬೇಕಾಗಿದೆ. ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಕ್ಯಾಬಿನೆಟ್‌ನಲ್ಲಿ ಪ್ರಸ್ತಾವ ಗೊಳ್ಳುವ ವಿಶ್ವಾಸ ಇದೆ ಎಂದರು.





