ಗುಜರಾತ್ ಏರ್ ಇಂಡಿಯಾ ದುರಂತ: ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷವಿಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ: ಕಳೆದ ವರ್ಷ 260 ಜನರ ಸಾವಿಗೆ ಕಾರಣವಾಗಿದ್ದ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ AI-171 ವಿಮಾನ ಅಪಘಾತದ ತನಿಖೆ ಅಂತಿಮ ಹಂತ ತಲುಪಿದ್ದು, ವಿಮಾನದ ‘ಫ್ಯೂಯಲ್ ಕಂಟ್ರೋಲ್ ಸ್ವಿಚ್’ (ಇಂಧನ ನಿಯಂತ್ರಣ ಸ್ವಿಚ್) ಲಾಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೋಲ್ ಅವರು, ಅಮೆರಿಕದ ಸಿಯಾಟಲ್‌ನಲ್ಲಿರುವ ಬೋಯಿಂಗ್ ಸಂಸ್ಥೆಯ (OEM) ತಜ್ಞರ ಸಮ್ಮುಖದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಅನ್ನು ಸುಧಾರಿತ ಪರೀಕ್ಷೆಗೊಳಪಡಿಸಲಾಗಿದ್ದು, ಯಾವುದೇ ನ್ಯೂನತೆ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಇನ್ನೊಂದೆಡೆ, ವಿಮಾನದ ಸಂಪೂರ್ಣ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್ (Thrust Control Module) ಕುರಿತು ಅಮೆರಿಕದ ಸಿಯಾಟಲ್‌ನಲ್ಲಿರುವ OEM ಕೇಂದ್ರದಲ್ಲಿ ಇನ್ನೂ ಪರಿಶೀಲನೆ ಮುಂದುವರಿದಿದ್ದು, ಅದರ ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಪಘಾತದ ಅಂತಿಮ ತನಿಖಾ ವರದಿ ವಿಳಂಬವಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಇಂತಹ ದೊಡ್ಡ ವಿಮಾನ ಅಪಘಾತಗಳ ತನಿಖೆಗೆ ನಿರ್ದಿಷ್ಟ ಕಾಲಮಿತಿ ಇರುವುದಿಲ್ಲ ಮತ್ತು ನಿಗದಿತ ತನಿಖಾ ನಿಯಮಾವಳಿಗಳ ಪ್ರಕಾರವೇ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಪಘಾತಕ್ಕೆ ಕಾರಣವಾದ ಎಲ್ಲಾ ಸಂಭಾವ್ಯ ಅಂಶಗಳು ಹಾಗೂ ಪರಿಸ್ಥಿತಿಗಳ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ತಕ್ಷಣ ಅಂತಿಮ ವರದಿಯನ್ನು ಸಾರ್ವಜನಿಕರ ಮಾಹಿತಿಗಾಗಿ ವಿಮಾನ ಅಪಘಾತ ತನಿಖಾ ದಳ (AAIB) ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.




