ಪ್ರತಿಭಟನೆಗೆ ಬಂದರೆ ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ: ವೈರಲ್ ವೀಡಿಯೊದಲ್ಲಿ ಬೆನ್ನಲ್ಲೇ ಪೊಲೀಸ್ ಚಾಲಕ ಅಮಾನತು
ಮಹಾರಾಷ್ಟ್ರ: ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗೆ ಬಂದರೆ ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿರುವ ವೈರಲ್ ವೀಡಿಯೊದಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ಮುಂಬೈ ಪೊಲೀಸರು ಗುರುವಾರ ತನಿಖೆಗೆ ಆದೇಶಿಸಿದ್ದು, ಸಂಬಂಧಪಟ್ಟ ಪೊಲೀಸ್ ಚಾಲಕನನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ.
ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಖಾಕಿಯಲ್ಲಿ ಗೂಂಡಾಗಿರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪೊಲೀಸ್ ಚಾಲಕನ ನಡೆ ಸಂಪೂರ್ಣವಾಗಿ ತಪ್ಪು ಎಂದು ಖಂಡಿಸಿದ್ದಾರೆ. ಸಂಬಂಧಪಟ್ಟ ಚಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ 25 ಸೆಕೆಂಡುಗಳ ವೀಡಿಯೊದಲ್ಲಿ, ಪೊಲೀಸ್ ಚಾಲಕನೊಬ್ಬ ಬಂಧಿತ ಇಬ್ಬರು ವಿದ್ಯಾರ್ಥಿಗಳಿಗೆ, ಮುಂದಿನ ಪ್ರತಿಭಟನೆಗಳಲ್ಲಿ ಭಾಗವಹಿಸಿದರೆ ಸುಳ್ಳು ಮಾದಕವಸ್ತು ಪ್ರಕರಣಗಳಲ್ಲಿ ಸಿಲುಕಿಸಲಾಗುವುದು ಎಂದು ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
“ನಾನು ನಿಮ್ಮನ್ನು ಇಲ್ಲಿ ಮತ್ತೆ ನೋಡಿದರೆ, ನಿಮ್ಮ ಜೇಬಿನಲ್ಲಿ 50 ಗ್ರಾಂ ‘ಪೌಡರ್’ ಹಾಕುತ್ತೇನೆ. ನಿಮಗೆ ಜಾಮೀನು ಸಿಗುವುದಿಲ್ಲ. ನಿಮ್ಮ ಇಡೀ ಜೀವನ ಹಾಳಾಗುತ್ತದೆ. ನಿಮ್ಮ ಕಾರಣದಿಂದಾಗಿ ನಾವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ” ಎಂದು ಚಾಲಕ ವಿದ್ಯಾರ್ಥಿಗಳಿಗೆ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.
ವೈರಲ್ ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಸತ್ಯಾಂಶಗಳನ್ನು ಪರಿಶೀಲಿಸಿದ ಬಳಿಕ, ವಿಚಾರಣೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಚಾಲಕನನ್ನು ಅವರ ಪ್ರಸ್ತುತ ಕರ್ತವ್ಯದಿಂದ ಬಿಡುಗಡೆಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.




