ಫೋಟೋ ಶೂಟ್‌ಗಾಗಿ ತರಲಾಗಿದ್ದ ಸಾಕಾನೆಯ ಅಟ್ಟಹಾಸ: 6 ಕಾರುಗಳು, 2 ಮನೆಗಳ ಗೋಡೆಗಳ ಧ್ವಂಸ
ತ್ರಿಶೂರ್: ಪ್ರಸಿದ್ಧ ವಡಕ್ಕುಂನಾಥನ್ ದೇವಾಲಯದ ದಕ್ಷಿಣ ಗೋಪುರ ಪ್ರವೇಶದ್ವಾರದ ಬಳಿ ಫೋಟೋಶೂಟ್‌ಗಾಗಿ ತರಲಾಗಿದ್ದ ‘ಶಿವಲಕ್ಷ್ಮಿ ಅಯ್ಯಪ್ಪನ್’ ಎಂಬ ಸಾಕಾನೆ ಏಕಾಏಕಿ ಮದವೇರಿ ಅಟ್ಟಹಾಸ ಮೆರೆದಿದೆ. ಗಾಂಧಿ ನಗರದ ಜನನಿಬಿಡ ಬೀದಿಗಳಲ್ಲಿ ನುಗ್ಗಿದ ಆನೆಯು ವಾಹನಗಳು, ಮನೆಗಳಿಗೆ ಹಾನಿ ಮಾಡಿದ್ದಲ್ಲದೆ, ಮಹಿಳೆಯೊಬ್ಬರು ಇದ್ದ ಕಾರನ್ನೇ ಪಲ್ಟಿ ಮಾಡಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ.
ವಡಕ್ಕುಂನಾಥನ್ ದೇವಾಲಯದ ಬಳಿ ಪೋಟೋಶೂಟ್ ಗಾಗಿ ಆನೆಯನ್ನು ಕರೆತರಲಾಗಿತ್ತು. ಈ ವೇಳೆ ಕೋಪಗೊಂಡ ಆನೆಯು ಮಾವುತನ ಮಾತು ಕೇಳದೆ ಅರಮನೆ ರಸ್ತೆಯ ಮೂಲಕ ದೌಡಾಯಿಸಿದೆ. ಪೆರಿಂಗಾವ್‌ನ ಕಟ್ಟಪ್ಪರಂನಿಂದ ಓಡುತ್ತಾ ಬಂದ ಆನೆಯು ಸುಮಾರು 300 ಮನೆಗಳಿರುವ ಗಾಂಧಿ ನಗರದ ವಸತಿ ಪ್ರದೇಶಕ್ಕೆ ನುಗ್ಗಿದೆ.
ಆನೆ ಓಡಿ ಬರುತ್ತಿದ್ದನ್ನು ಕಂಡ ಸ್ಕೂಟರ್ ಸವಾರರು ಕಾರಿನಲ್ಲಿದ್ದ ಸಂಗೀತಾ ಎಂಬ ಮಹಿಳೆಗೆ ಕಾರನ್ನು ರಿವರ್ಸ್ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದಾರೆ. ಆದರೆ ಅವರ ಮಗಳು ಶ್ರುತಿ ಹಿಂದೆ ಸ್ಕೂಟರ್‌ನಲ್ಲಿದ್ದ ಕಾರಣ, ಆಕೆಗೆ ಹಿಂದೆ ಹೋಗುವಂತೆ ಸಿಗ್ನಲ್ ನೀಡಲು ಸಂಗೀತಾ ಹಾರ್ನ್ ಮಾಡಿದ್ದಾರೆ.
ಅಷ್ಟರಲ್ಲೇ ಸ್ಥಳಕ್ಕೆ ಧಾವಿಸಿದ ಆನೆಯು ಸಂಗೀತಾ ಅವರಿದ್ದ ಕಾರನ್ನು ಸೀದಾ ಎತ್ತಿ ಪಲ್ಟಿ ಮಾಡಿದೆ. ಕಾರ್ ಒಳಗೆ ಸಿಲುಕಿಕೊಂಡಿದ್ದ ಸಂಗೀತಾರನ್ನು ಸ್ಥಳೀಯರು ತಕ್ಷಣವೇ ಗಾಜು ಒಡೆದು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ. ಆನೆಯು ಒಟ್ಟು ಆರು ಕಾರುಗಳು ಮತ್ತು ಎರಡು ಮನೆಗಳ ಗೋಡೆಗಳನ್ನು ಧ್ವಂಸಗೊಳಿಸಿದೆ. ಸದ್ಯ ಆನೆಯನ್ನು ಹತೋಟಿಗೆ ತರಲಾಗಿದೆ.





