July 9, 2026

ವಯನಾಡ್ ಭೂಕುಸಿತ: ಮತ್ತೆ ನಾಲ್ವರ ಮೃತದೇಹಗಳು ಪತ್ತೆ; ಮೃತರ ಸಂಖ್ಯೆ ಏಳಕ್ಕೆ ಏರಿಕೆ

0
IMG-20260709-WA0138

ಕೋಯಿಕ್ಕೋಡ್-ವಯನಾಡ್ ಬಳಿಯ ಅವಳಿ ಸುರಂಗ ಯೋಜನೆಯ ಭಾಗವಾಗಿ ಮೇಪ್ಪಾಡಿಯ ಕಲ್ಲಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಗುರುವಾರ ಮತ್ತೆ ನಾಲ್ವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ, ಮೂವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಘಟನೆಯಲ್ಲಿ ಒಂಬತ್ತು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಉಳಿದ ಮೂವರು ಕಾರ್ಮಿಕರು ಈಗಲೂ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.

ಮಂಗಳವಾರ ಬೆಳಗ್ಗೆ ಸುಮಾರು 11.15 ಗಂಟೆಗೆ ಮೀನಾಕ್ಷಿ ಸೇತುವೆ ಬಳಿ ನಡೆಯುತ್ತಿರುವ ಅವಳಿ ಸುರಂಗ ಯೋಜನೆಯ ಹೆಬ್ಬಾಗಿಲಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದಾಗಿ ಕಾರ್ಮಿಕರು ಹಾಗೂ ಭಾರಿ ಯಂತ್ರೋಪಕರಣಗಳು ಮಣ್ಣು ಹಾಗೂ ಅವಶೇಷಗಳಡಿ ಹೂತುಹೋಗಿದ್ದವು.

ರಕ್ಷಣಾ ತಂಡಗಳು ಬುಧವಾರ ರಾತ್ರಿ ಕೂಡಾ ರಕ್ಷಣಾ ಕಾರ್ಯಾಚರಣೆಯನ್ನು ನಡೆಯಲು ಪ್ರಯತ್ನಿಸಿದರೂ, ನಿರಂತರವಾಗಿ ಸುರಿಯತ್ತಿರುವ ಮಳೆ ಹಾಗೂ ಮತ್ತೆ ಭೂಕುಸಿತ ಸಂಭವಿಸುವ ಭೀತಿಯಿಂದ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಹವಾಮಾನ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸಿದ್ದರಿಂದ, ಗುರುವಾರ ಮುಂಜಾನೆಯಿಂದ ಮತ್ತೆ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಇನ್ನೂ ನಾಪತ್ತೆಯಾಗಿರುವ ಕಾರ್ಮಿಕರನ್ನು ಪತ್ತೆ ಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಪೊಲೀಸ್, ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳ ಸ್ವಯಂಸೇವಕರು ಸೇರಿದಂತೆ ಹಲವು ತಂಡಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಮಣ್ಣು ಹಾಗೂ ಅವಶೇಷಗಳನ್ನು ತೆರವುಗೊಳಿಸಲು ಅರ್ತ್ ಮೂವರ್ಸ್ ಹಾಗೂ ವಿಶೇಷ ಪರಿಕರಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!