ಬೆಳ್ತಂಗಡಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಒಟ್ಟು ಆರು ಮಂದಿ ಪ್ರಯಾಣಿಕರಿಗೆ ಗಾಯ
ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೀಟ್ ಕಾಡ್ ಬಳಿ ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಎರಡು ಕಾರುಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಭಾರಿ ಪ್ರಮಾಣದ ಪ್ರಾಣಾಪಾಯವೊಂದು ತಪ್ಪಿದೆ.
ಅಪಘಾತದಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಕಾವೂರು ಮೂಲದ ವಿನಿತಾ (22), ಗೌರಮ್ಮ (49), ಕೊಟ್ಟೇಗೌಡ (55) ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಣ್ಣ (65), ಶ್ರೀನಿವಾಸ (32) ಮತ್ತು ಶಶಿಧರ್ (33) ಎಂದು ಗುರುತಿಸಲಾಗಿದೆ.
ಸ್ಥಳೀಯರಿಂದ ತಕ್ಷಣದ ರಕ್ಷಣೆ: ಅಪಘಾತ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಹಾಗೂ ಹಾದಿಹೋಕರು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ವಾಹನ ಸವಾರರು ಜಾಗರೂಕತೆಯಿಂದ ಚಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




