ಮಂಗಳೂರು: ಕೆಪಿಟಿ ಬಳಿ ಭೀಕರ ಅಪಘಾತ: ಕಡಬ ನಿವಾಸಿ, ಸಿಐಎಸ್ ಎಫ್ ಯೋಧ ಮೃತ್ಯು
Oplus_16908288
ರಾಮಕುಂಜ: ಮಂಗಳೂರಿನ ಕೆಪಿಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಡಬ ತಾಲೂಕಿನ ಕ್ಯೂಲ ಗ್ರಾಮದ ಪುತ್ಯೆ ನಿವಾಸಿ ಪರಮೇಶ್ವರ ಗೌಡರವರ ಪುತ್ರ, ಸಿಐಎಸ್‌ಎಫ್ ಯೋಧ ಸೀತಾರಾಮ ಗೌಡ(50ವ.) ಎಂಬವರು ಮೃತಪಟ್ಟ ಘಟನೆ ಜು.8ರಂದು ಸಂಜೆ ನಡೆದಿದೆ.
ಸೀತಾರಾಮ ಗೌಡರವರು ಸಿಐಎಸ್‌ಎಫ್‌ನಲ್ಲಿ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ಜು.3ರಂದು ರಜೆಯ ಮೇಲೆ ಊರಿಗೆ ಬಂದವರು ಮಂಗಳೂರಿನಲ್ಲಿನ ಮನೆಯಲ್ಲಿ ವಾಸ್ತವ್ಯವಿದ್ದರು. ಜು.7ರಂದು ಎಸ್‌ಐಆರ್ ದಾಖಲಾತಿ ನೀಡಲು ಕೊಲದ ಮನೆಗೆ ಬಂದವರು ಜು.8ರಂದು ಮಧ್ಯಾಹ್ನ ಕೊಲದಿಂದ ಮಂಗಳೂರಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿಯ ರೆಸಿಡೆನ್ಸಿಯಲ್ ಸ್ಟಾರ್ ಹೋಟೆಲ್ ಬಳಿ ಸಂಜೆ 3.40ಕ್ಕೆ ತಲುಪಿದಾಗ ರಸ್ತೆ ಅಪಘಾತವಾಗಿತ್ತು. ಗಂಭೀರ ಗಾಯಗೊಂಡಿದ್ದ ಸೀತಾರಾಮ ಗೌಡರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇವರು ಬೈಕ್ ಸ್ವಯಂ ಸ್ಕಿಡ್ ಆಗಿ ಬಿದ್ದು ಅಥವಾ ಯಾವುದಾದರೂ ವಾಹನ ಢಿಕ್ಕಿಯಾಗಿ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತರ ಪತ್ನಿ ರೋಹಿಣಿ ಅವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಸೀತಾರಾಮ ಗೌಡ ಅವರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.




