July 9, 2026

ವಿಟ್ಲ:ಇಬ್ಬರು ಯುವಕರ ಮೇಲೆ ಆಟೋ ರಿಕ್ಷಾದಲ್ಲಿ ಬಂದ ತಂಡದಿಂದ ಹಲ್ಲೆ: ಮೂವರು ಪುಡಿ ರೌಡಿಗಳ ವಿರುದ್ಧ ಪ್ರಕರಣ ದಾಖಲು

0
IMG-20220615-WA0046

ವಿಟ್ಲ: ಮೋಟಾರ್‌ಸೈಕಲ್ ಕೆಟ್ಟು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೇಂಟಿಂಗ್ ಕೆಲಸ ಮಾಡುತ್ತಿರುವ ಮಹಮ್ಮದ್ ನಸೀಫ್ (22) ಅವರು ನೀಡಿದ ದೂರಿನ ಪ್ರಕಾರ, ಜುಲೈ 7ರಂದು ಸಂಜೆ ಕೊಳಂಬೆಯಲ್ಲಿರುವ ತಮ್ಮ ಅಜ್ಜಿ ಮನೆಯಿಂದ ಮಾಣಿಯಲ್ಲಿರುವ ಬಾಡಿಗೆ ಮನೆಗೆ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ವೇಳೆ ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

ಈ ವೇಳೆ ಸ್ನೇಹಿತ ಮಹಮ್ಮದ್ ಜಾಹೀದ್ ಡಿ ಅವರು ಸ್ಕೂಟರ್‌ನಲ್ಲಿ ಅಲ್ಲಿಗೆ ಬಂದಿದ್ದರು. ಆಗ ಆಟೋರಿಕ್ಷಾದಲ್ಲಿ ಬಂದ ವಿವೇಕ ಶೆಟ್ಟಿ, ಉಮೇಶ್ ಹಾಗೂ ಶಿವರಾಮ ಶೆಟ್ಟಿ ಎಂಬವರು ಆಟೋರಿಕ್ಷಾ ನಿಲ್ಲಿಸಿ ‘ನೀವು ಏಕೆ ಇಲ್ಲಿ ನಿಂತಿರುವುದು, ನೀವು ಬ್ಯಾರಿಗಳು ನಿಮಗೇನು ಕೆಲಸ ಇಲ್ಲಿ’ ಎಂದು ಹೇಳಿದಾಗ ದೂರುದಾರರು ಮೋಟರ್ ಸೈಕಲ್ ಹಾಳಾಗಿದ್ದು ಅದಕ್ಕೆ ರಸ್ತೆಯಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ನಂತರ ಆರೋಪಿತರು ಬ್ಯಾರಿ ಬೇವರ್ಸಿಗಳು ನಡು ರಸ್ತೆಯಿಂದ ಹೋಗಿ ಎಂದಾಗ ದೂರುದಾರರು ಮತ್ತು ಆತನ ಸ್ನೇಹಿತ ಅವರ ಮೋಟರ್ ಸೈಕಲ್ ನಲ್ಲಿ ಹೋಗಲು ಪ್ರಾರಂಭಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಲ್ಲಿ ಮಹಮ್ಮದ್ ನಸೀಫ್ ಅವರ ಭುಜ, ಕೆನ್ನೆ ಹಾಗೂ ಹೊಟ್ಟೆಗೆ ಗಾಯಗಳಾಗಿದ್ದು, ಮಧ್ಯ ಪ್ರವೇಶಿಸಿದ ಮಹಮ್ಮದ್ ಜಾಹೀದ್ ಅವರ ಕುತ್ತಿಗೆಗೆ ಹೊಡೆದು ಶರ್ಟ್ ಎಳೆದು ಹರಿದಿರುವುದಾಗಿಯೂ, ಮತ್ತೆ ಈ ಭಾಗಕ್ಕೆ ಬಂದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿವೇಕ ಶೆಟ್ಟಿ, ಉಮೇಶ್ ಹಾಗೂ ಶಿವರಾಮ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ 08-07-2026 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ Crime No. 152/2026 ರಂತೆ ಎಫ್‌ಐಆರ್ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 126(2), 115(2), 352, 351(2) r/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!