ಉಡುಪಿ: ನಿರ್ಮಾಣ ಹಂತದ ಬಾವಿಯ ಮಣ್ಣು ಕುಸಿತ: ಬಾವಿಯೊಳಗೆ ಸಿಲುಕಿದ್ದ ಕಾರ್ಮಿಕ ಸಾವು
ಉಡುಪಿ: ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಎಂಬಲ್ಲಿ ನಿರ್ಮಾಣ ಹಂತದ ಬಾವಿಯ ಮಣ್ಣು ಏಕಾಏಕಿ ಕುಸಿದು ಬಿದ್ದು, ಅದರೊಳಗೆ ಸಿಲುಕಿದ್ದ ಉತ್ತರ ಕರ್ನಾಟಕದ ಕೊಪ್ಪಳ ಮೂಲದ ಯುವ ಕಾರ್ಮಿಕ ರಮೇಶ್ (25) ಅವರ ಮೃತದೇಹ ಸತತ 7 ಗಂಟೆಗಳ ಜಂಟಿ ಕಾರ್ಯಾಚರಣೆಯ ಬಳಿಕ ಮಧ್ಯರಾತ್ರಿ ವೇಳೆ ಪತ್ತೆಯಾಗಿದೆ.
ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಹೊಸದಾಗಿ ಬಾವಿ ನಿರ್ಮಾಣ ಮಾಡುವ ಕಾಮಗಾರಿಯನ್ನು ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಎಂಬವರು ವಹಿಸಿಕೊಂಡಿದ್ದರು.
ಈ ಕೆಲಸಕ್ಕಾಗಿ ಅವರು ಕೊಪ್ಪಳ ಜಿಲ್ಲೆಯ ಐದು ಜನ ಕೂಲಿ ಕಾರ್ಮಿಕರನ್ನು ಮೇ 21ರಂದು ಕಾರ್ಕಳದಿಂದ ಕರೆತಂದಿದ್ದರು. ಮೇ 22ರ ಶುಕ್ರವಾರದಂದು ಕಾರ್ಮಿಕರು ಎಂದಿನಂತೆ ಬಾವಿಯಿಂದ ಮಣ್ಣು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು.
ಸಂಜೆ 5 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬಿಡುವ ಸಮಯದಲ್ಲಿ, ರಮೇಶ್ ಅವರು ಬಾವಿಯ ತಳಭಾಗದಲ್ಲಿ ಮಣ್ಣು ತೆಗೆಯುತ್ತಿದ್ದರು. ಈ ವೇಳೆ ಬಾವಿಯ ದಂಡೆಯ ಮೇಲ್ಭಾಗದ ಮಣ್ಣು ಒಮ್ಮೆಲೆ ಭಾರಿ ಪ್ರಮಾಣದಲ್ಲಿ ಕುಸಿದು ಬಿದ್ದಿದೆ.
ಇದರ ಪರಿಣಾಮವಾಗಿ ರಮೇಶ್ ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಾವಿಯಲ್ಲಿದ್ದ ಇನ್ನೋರ್ವ ಕಾರ್ಮಿಕ ತಕ್ಷಣವೇ ಜಾಣ್ಮೆಯಿಂದ ಮೇಲಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.





