8,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ Meta
ನವದೆಹಲಿ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಾತೃಸಂಸ್ಥೆ ‘ಮೆಟಾ’ (Meta), ಜಾಗತಿಕ ಮಟ್ಟದಲ್ಲಿ ತನ್ನ ಒಟ್ಟು ಸಿಬ್ಬಂದಿ ಪೈಕಿ ಶೇ. 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ವೆಚ್ಚ ಕಡಿತ ಹಾಗೂ ಎಐ ಮೂಲಸೌಕರ್ಯದ ಹೂಡಿಕೆಗೆ ಹಣ ಕ್ರೋಡೀಕರಿಸುವ ಸಲುವಾಗಿ ಸುಮಾರು 8,000 ಉದ್ಯೋಗಿಗಳನ್ನು ಕೆಲಸದಿಂದ ಮುಕ್ತಿಗೊಳಿಸಲು ಕಂಪನಿ ಅಧಿಕೃತವಾಗಿ ಚಾಲನೆ ನೀಡಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಮೂಲಗಳು ದೃಢಪಡಿಸಿವೆ.
ಮೇ 20ರ ಬುಧವಾರದಂದು ಜಾಗತಿಕ ಮಟ್ಟದಲ್ಲಿ ಈ ಲೇ-ಆಫ್ (Layoff) ಪ್ರಕ್ರಿಯೆ ಆರಂಭವಾಗಿದ್ದು, ಉತ್ತರ ಅಮೆರಿಕ ಸೇರಿದಂತೆ ಹಲವು ಪ್ರಮುಖ ವಲಯಗಳ ಉದ್ಯೋಗಿಗಳಿಗೆ ಅಂದು ಮನೆಯಿಂದಲೇ ಕೆಲಸ ಮಾಡುವಂತೆ (Work from home) ಸೂಚಿಸಲಾಗಿತ್ತು. ಮೇ 20 ರ ಮಧ್ಯರಾತ್ರಿ ದಾಟಿದ ಬಳಿಕ ಸಿಂಗಾಪುರ, ಯುರೋಪ್ ಹಾಗೂ ಅಮೆರಿಕದ ಕಚೇರಿಗಳ ಸಿಬ್ಬಂದಿಗೆ ಇಮೇಲ್ ಮೂಲಕ ವಜಾ ಆದೇಶಗಳನ್ನು ರವಾನಿಸಲಾಗಿದೆ.





