ಮಂಗಳೂರು: ಮನೆಯ ಆವರಣ ಗೋಡೆ, ಮಣ್ಣು ಕುಸಿತ: ಕಂಟ್ರಾಕ್ಟರ್ ಸಾವು
ಮಂಗಳೂರು: ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಮನೆಯೊಂದರ ಆವರಣ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗೋಡೆ ಹಾಗೂ ಮಣ್ಣು ಏಕಾಏಕಿ ಕುಸಿದು ಬಿದ್ದು, ಹಿರಿಯ ಕಂಟ್ರಾಕ್ಟರ್ ಒಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೇ 21ರ ಗುರುವಾರ ನಡೆದಿದೆ. ನಗರದ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ಮಂಗಳೂರು ಉತ್ಪನ್ನಗಳು
ಆಂಟನಿ ಮಸ್ಕರೇನಸ್ ಅವರು ಕುಂಟಿಕಾನದ ಲೋಹಿತ್ ನಗರದಲ್ಲಿ ಮನೆಯೊಂದರ ಹಿಂಭಾಗದ ಆವರಣ ಗೋಡೆ ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡಿದ್ದರು. ಈಗಾಗಲೇ ಒಂದಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದವು. ಗುರುವಾರದಂದು ಅವರು ಎಂದಿನಂತೆ ಕಾರ್ಮಿಕರ ಜೊತೆ ನಿಂತು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಾ, ಗೋಡೆಯ ಅಳತೆ ಕಾರ್ಯದಲ್ಲಿ ತೊಡಗಿದ್ದರು.
ಈ ವೇಳೆ ತಡೆಗೋಡೆಯ ಮಣ್ಣು ಹಾಗೂ ಗೋಡೆ ಏಕಾಏಕಿ ಇವರ ಮೇಲೆಯೇ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಆಂಟನಿ ಅವರು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ತಕ್ಷಣವೇ ಅಲ್ಲಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ಧಾವಿಸಿ ತೀವ್ರ ಕಾರ್ಯಾಚರಣೆ ನಡೆಸಿ ಆಂಟನಿ ಅವರನ್ನು ಮಣ್ಣಿನಡಿಯಿಂದ ಮೇಲೆತ್ತಿದ್ದಾರೆ.
ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾವೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.





