ಧರ್ಮಸ್ಥಳ ಪ್ರಕರಣ: ಬಂಗ್ಲಗುಡ್ಡೆ ಕಾಡಿಗೆ ಬೆಂಗಳೂರಿನ ಎಫ್‌ಎಸ್‌ಎಲ್ ತಂಡ ಭೇಟಿ- ಪರಿಶೀಲನೆ, ತನಿಖೆ ಚುರುಕು
ಬೆಳ್ತಂಗಡಿ: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿನ “ಬುರುಡೆ ಪ್ರಕರಣ”ದ ತನಿಖೆ ಇದೀಗ ಮತ್ತಷ್ಟು ಚುರುಕುಗೊಂಡಿದೆ.
ಪ್ರಕರಣದ ಸತ್ಯಾಸತ್ಯತೆ ತಲಾಷೆಗಾಗಿ ಬೆಂಗಳೂರಿನಿಂದ ಆಗಮಿಸಿರುವ ಮೂರು ಮಂದಿ ಎಫ್‌ಎಸ್‌ಎಲ್ (FSL) ತಜ್ಞ ಅಧಿಕಾರಿಗಳ ತಂಡವು ಎಸ್‌ಐಟಿ (SIT) ಅಧಿಕಾರಿಗಳೊಂದಿಗೆ ಗುರುವಾರ ಬಂಗ್ಲಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಮಹಜರು ನಡೆಸಿದೆ.
ಬಂಗ್ಲಗುಡ್ಡೆ ಕಾಡಿನಲ್ಲಿ ಈ ಹಿಂದೆ ಮಾನವನ ಬುರುಡೆ ಪತ್ತೆಯಾಗಿದ್ದ ನಿಖರ ಜಾಗಕ್ಕೆ ಎಫ್‌ಎಸ್‌ಎಲ್ ಹಾಗೂ ಎಸ್‌ಐಟಿ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ವೇಳೆ ಪ್ರಕರಣದ ಪ್ರಮುಖ ಕೊಂಡಿ ಎನ್ನಲಾದ ಪ್ರದೀಪ್ ಕುಲಾಲ್ ಎಂಬಾತನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವೇಳೆ ಕಾಡಿನಲ್ಲಿ ಬುರುಡೆ ಹೊರತೆಗೆಯುವ ವಿಡಿಯೋ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಪ್ರದೀಪ್ ಕುಲಾಲ್ ಇದ್ದುದು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳಿಂದ ತೀವ್ರ ವಿಚಾರಣೆಗೆ ಒಳಗಾಗಿದ್ದ ಪ್ರದೀಪ್ ಕುಲಾಲ್, ಹೊಸ ಕಾಯ್ದೆಯಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 183 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಎಫ್‌ಎಸ್‌ಎಲ್ ಅಧಿಕಾರಿಗಳು ಸೈನ್ಸ್ ಮತ್ತು ಫೋರೆನ್ಸಿಕ್ ಆಧಾರದ ಮೇಲೆ ಸಾಕ್ಷ್ಯ ಕಲೆಹಾಕಲು ಕಾಡಿಗೆ ಇಳಿದಿದ್ದಾರೆ. ಈ ಭೇಟಿಯಿಂದಾಗಿ ಬುರುಡೆ ರಹಸ್ಯದ ಹಿಂದಿರುವ ಆಘಾತಕಾರಿ ಸತ್ಯಗಳು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ.





